ಯೆಶಾಯ 39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಬಾಬೆಲಿನ ಬಂದ ದೂತರು 1 ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬುವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು. 2 ಹಿಜ್ಕೀಯನು ಬಂದ ದೂತರನ್ನು ಸಂತೋಷದಿಂದ ನೋಡಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದುದ್ದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ. 3 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹುದೂರ ದೇಶದಿಂದ ಬಾಬೆಲಿನಿಂದ ನನ್ನ ಬಳಿಗೆ ಬಂದವರು” ಎಂದು ಉತ್ತರಕೊಟ್ಟನು. 4 ಯೆಶಾಯನು ತಿರುಗಿ ಹಿಜ್ಕೀಯನಿಗೆ, “ಅವರು ನಿನ್ನ ಅರಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ವಸ್ತು ಒಂದೂ ಇರುವುದಿಲ್ಲ” ಎಂದನು. 5 ಆಗ ಪ್ರವಾದಿಯಾದ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳು. 6 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲೇನೂ ಉಳಿಯುವುದಿಲ್ಲ. 7 “ಬಾಬೆಲಿನ ಅರಸನು ಬಂದು, ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಅನ್ನುತ್ತಾನೆ” ಎಂದು ಹೇಳಿದನು. 8 “ಹೇಗೂ ನನ್ನ ಜೀವಮಾನದಲ್ಲಿ ತಪ್ಪದೆ ಸೌಭಾಗ್ಯವಿರುವುದು” ಎಂದುಕೊಂಡು ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ” ಎಂದು ಉತ್ತರಕೊಟ್ಟನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.