ಯೆಶಾಯ 38 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಹಿಜ್ಕೀಯನ ರೋಗನಿವಾರಣೆ 1 ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡು. ಏಕೆಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದು ಹೇಳಿದನು. 2 ಇದನ್ನು ಕೇಳಿದೊಡನೆ ಹಿಜ್ಕೀಯನು ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನನ್ನು ಪ್ರಾರ್ಥಿಸಿದನು. 3 ಹಿಜ್ಕೀಯನು, “ಯೆಹೋವನೇ, ನಾನು ನಂಬಿಗಸ್ತನಾಗಿಯೂ, ಯಥಾರ್ಥಚಿತ್ತನಾಗಿಯೂ ನಿನಗೆ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನ್ನು ನೆನಪುಮಾಡಿಕೋ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು. 4 ಆಗ ಯೆಹೋವನು ಯೆಶಾಯನಿಗೆ, 5 “ನೀನು ಹೋಗಿ ನನ್ನ ಪ್ರಜೆಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ದಾವೀದನ ಪೂರ್ವಿಕರಾದ ಯೆಹೋವನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. 6 ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುವೆನು, ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು. 7 ಯೆಹೋವನು ನುಡಿದದ್ದನ್ನು ನೆರವೇರಿಸುವನು ಎಂಬುದಕ್ಕೆ ಒಂದು ಗುರುತನ್ನು ಕಾಣುವಿ. 8 ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡುವೆನು’ ಎಂದು ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬುದಾಗಿ ತಿಳಿಸು” ಎಂದು ಆಜ್ಞಾಪಿಸಿದನು. ಅದರಂತೆ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂತು. 9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಆರೋಗ್ಯವನ್ನು ಹೊಂದಿದ ನಂತರ ಬರೆದದ್ದು. 10 ನನ್ನ ರೋಗದಲ್ಲಿ ಹೀಗೆಲ್ಲಾ ಅಂದುಕೊಂಡೆನು, “ನನ್ನ ಮಧ್ಯಪ್ರಾಯದಲ್ಲಿ ಪಾತಾಳ ದ್ವಾರಗಳೊಳಗೆ ಸೇರಿದ್ದೇನೆ, ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರ್ಷಗಳು ನನಗೆ ನಷ್ಟವಾದವು. 11 ನಾನು ಇನ್ನು ಜೀವಲೋಕದವನಾಗಿ ಯೆಹೋವನ ದರ್ಶನವನ್ನು ಹೊಂದಿದೆನಲ್ಲಾ, ಇನ್ನು ಭೂಲೋಕ ನಿವಾಸಿಗಳಲ್ಲಿ ಒಬ್ಬನಾಗಿ ಮನುಷ್ಯರನ್ನು ದೃಷ್ಟಿಸಲಾರೆನು. 12 ನನ್ನ ಆಶ್ರಯವು ಕುರುಬನ ಗುಡಾರದಂತೆ ಕಿತ್ತು, ನನ್ನ ಕಡೆಯಿಂದ ಒಯ್ಯಲ್ಪಟ್ಟಿದೆ. ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ, ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀ. 13 ನಾನು ಬೆಳಗಿನ ತನಕ ಕೂಗಿಕೊಂಡೇ ಇದ್ದೆನು. ಆತನು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ, ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀಯಲ್ಲಾ ಎಂದು ಪ್ರಲಾಪಿಸಿದೆನು. 14 ನಾನು ಬಾನಕ್ಕಿಯಂತೆಯೂ, ಬಕದ ಹಾಗೂ ಕೀಚುಗುಟ್ಟಿದೆನು, ಪಾರಿವಾಳದಂತೆ ಮೊರೆಯಿಟ್ಟೆನು, ಯೆಹೋವನೇ, ನಾನು ಬಾಧೆಪಡುತ್ತಿದ್ದೇನೆ, ನನಗೆ ಆಶ್ರಯವಾಗು ಎಂದು ನಿನ್ನನು ದೃಷ್ಟಿಸುತ್ತಾ ಕಂಗೆಟ್ಟೆನು. 15 ನಾನು ಏನು ಹೇಳಲಿ! ಆತನು ನನಗೆ ಮಾತುಕೊಟ್ಟು ಅದರಂತೆ ತಾನೇ ನೆರವೇರಿಸಿದ್ದಾನೆ! ನನ್ನ ಆತ್ಮಕ್ಕೆ ಸಂಭವಿಸಿದ ದುಃಖವನ್ನು ಸ್ಮರಿಸುತ್ತಾ ನನ್ನ ಜೀವಮಾನದಲ್ಲೆಲ್ಲಾ ಮೆಲ್ಲಗೆ ನಡೆಯುವೆನು. 16 ಯೆಹೋವನೇ, ಇಂಥಾ ಸಂಭವಗಳಿಂದ ಮನುಷ್ಯರು ಬದುಕುತ್ತಾರೆ. ಅವುಗಳಿಂದಲೇ ನನ್ನ ಆತ್ಮವು ಜೀವಿಸುತ್ತದೆ. ಈಗ ನನ್ನನ್ನು ಸ್ವಸ್ಥಮಾಡಿ ಬದುಕುವಂತೆ ಮಾಡಿದೆ. 17 ಆಹಾ, ನಾನು ಪಟ್ಟ ದುಃಖವು ನನ್ನ ಸುಖಕ್ಕಾಗಿಯೇ ಆಯಿತು, ನನ್ನ ಆತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನ ಮೇಲೆ ಹಾಕಿಕೊಂಡಿದ್ದಿ. 18 ಪಾತಾಳದವರು ನಿನ್ನನ್ನು ಸ್ತುತಿಸುವುದಿಲ್ಲ, ಸತ್ತವರು ನಿನ್ನನ್ನು ಕೀರ್ತಿಸುವುದಿಲ್ಲ, ಅಧೋಲೋಕಕ್ಕೆ ಇಳಿದುಹೋದವರು ನಿನ್ನ ಸತ್ಯ ಸಂಧತೆಯನ್ನು ಆಶ್ರಯಿಸುವುದಿಲ್ಲ. 19 ಜೀವಂತನು, ಜೀವಂತನೇ ನಿನ್ನನ್ನು ಸ್ತುತಿಸುವನು, ಹೌದು, ಜೀವಂತನಾದ ನಾನೇ ಈ ಹೊತ್ತು ನಿನ್ನನ್ನು ಹೊಗಳುವೆನು. ತಂದೆಯು ಮಕ್ಕಳಿಗೆ ನಿನ್ನ ಸತ್ಯಸಂಧತೆಯನ್ನು ಬೋಧಿಸುವನು. 20 ಯೆಹೋವನು ನನಗೆ ರಕ್ಷಣಾಪರನಾಗಿದ್ದಾನೆ. ನಮ್ಮ ಜೀವಮಾನದಲ್ಲೆಲ್ಲಾ ಯೆಹೋವನ ಆಲಯದಲ್ಲಿ ನಮ್ಮ ಕಿನ್ನರಿ ವೀಣೆಗಳನ್ನು ನುಡಿಸುವೆವು.” 21 ಯೆಶಾಯನು, “ಅಂಜೂರದ ಹಣ್ಣುಗಳ ಉಂಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅರಸನು ಗುಣಹೊಂದುವನು” ಎಂದು ಅಪ್ಪಣೆಕೊಟ್ಟನು. 22 ಹಿಜ್ಕೀಯನು, “ನಾನು ಗುಣಹೊಂದಿ ಯೆಹೋವನ ಆಲಯವನ್ನು ಸೇರುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದ್ದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.