ಯೆಶಾಯ 33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅಪಾಯವೂ ಮುಂದಿನ ಸಂರಕ್ಷಣೆಯೂ 1 ಸೂರೆಯಾಗದಿದ್ದರೂ ಸೂರೆಮಾಡಿದಿ! ಬಾಧೆಪಡದಿದ್ದರೂ ಬಾಧಿಸಿದಿ! ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ. ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು. 2 ಯೆಹೋವನೇ, ನಮ್ಮನ್ನು ಕರುಣಿಸು! ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ. ಪ್ರತಿಮುಂಜಾನೆಯೂ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನಲ್ಲಿ ನಮಗೆ ರಕ್ಷಣೆಯಾಗಿಯೂ ಇರು. 3 ಭೋರ್ಗರೆಯುವ ಶಬ್ದಕ್ಕೆ ಜನಾಂಗಗಳು ಓಡುವವು; ನೀನು ಏಳುವಾಗ ರಾಜ್ಯಗಳು ದಿಕ್ಕಾಪಾಲಾಗುವವು. 4 ನಿಮ್ಮ ಕೊಳ್ಳೆಯು ಮಿಡತೆಗಳು ಕೂಡಿಸುವ ಹಾಗೆ ಕೂಡಿಸಲ್ಪಡುವುದು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು. 5 ಯೆಹೋವನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಣ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗಳಿಂದ ತುಂಬಿಸಿದ್ದಾನೆ. 6 ಜ್ಞಾನವೂ, ತಿಳಿವಳಿಕೆಯೂ, ರಕ್ಷಣಾಕಾರ್ಯದ ಸಮೃದ್ಧಿಯೂ ಇರುವುದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವುದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ ನಿಧಿಯಾಗುವುದು. 7 ಇಗೋ, ಅವರ ಸಿಂಹವೀರರು ಹೊರಗೆ ಹಾಹಾಕಾರ ಮಾಡುತ್ತಿದ್ದಾರೆ, ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ. 8 ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ಇಲ್ಲವೇ ಇಲ್ಲ; ಶತ್ರುವು ಒಪ್ಪಂದವನ್ನು ಮೀರಿದ್ದಾನೆ, ಪಟ್ಟಣಗಳನ್ನು ತಿರಸ್ಕರಿಸಿದ್ದಾನೆ, ಯಾವ ಮನುಷ್ಯರನ್ನೂ ಗಣನೆಗೆ ತಾರನು. 9 ದೇಶವು ಪ್ರಲಾಪಿಸಿ ಕುಗ್ಗುತ್ತದೆ, ಲೆಬನೋನ್ ನಾಚಿಕೊಂಡು ಒಣಗುತ್ತದೆ, ಶಾರೋನ್ ಬೆಂಗಾಡಾಗಿದೆ, ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ. 10 ಯೆಹೋವನು ಹೀಗೆನ್ನುತ್ತಾನೆ, “ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು. 11 ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರುವಿರಿ. ನಿಮ್ಮ ಉಸಿರೇ ನಿಮ್ಮನ್ನು ನುಂಗುವ ಜ್ವಾಲೆಯಾಗುವುದು. 12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿಹಚ್ಚಿದಂತಾಗುವುದು. 13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. ಯೆಹೋವನ ರಕ್ಷಣೆಯನ್ನು ಹೊಂದತಕ್ಕವರು 14 “ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಆ ಭ್ರಷ್ಟರು ನಡುಕಕ್ಕೆ ಒಳಗಾಗಿ, ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗುವರು” ಎಂದುಕೊಳ್ಳುತ್ತಾರೆ. 15 ಸನ್ಮಾರ್ಗದಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು, ಲಂಚಮುಟ್ಟದಂತೆ ಕೈ ಒದರಿ, ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು. 16 ಇವನಿಗೆ ಗಿರಿದುರ್ಗಗಳೇ, ಆಶ್ರಯ ಅನ್ನವು ಉಚಿತವಾಗಿ ಒದಗುವುದು, ನೀರು ನಿಸ್ಸಂದೇಹವಾಗಿ ದೊರಕುವುದು. ಯೆರೂಸಲೇಮಿನ ಮುಂದಿನ ಸುಸ್ಥಿತಿ 17 ನೀವು ಭೂಷಿತ ರಾಜನನ್ನು ಕಣ್ಣಾರೆ ದರ್ಶನ ಮಾಡುವಿರಿ. ಅತಿವಿಸ್ತಾರವಾದ ಸ್ವದೇಶವನ್ನು ನೀವು ಕಣ್ಣು ತುಂಬಾ ನೋಡುವಿರಿ. 18 ಆಗ ನೀವು ಹಿಂದಿನ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ. 19 ನಿಮಗೆ ತಿಳಿಯದ ಅನ್ಯಭಾಷೆಯನ್ನೂ, ನೀವು ಗ್ರಹಿಸಲಾರದ ತೊದಲು ಮಾತುಗಳನ್ನೂ ಆಡುವ ಆ ಕ್ರೂರ ಜನರನ್ನು ಇನ್ನು ಮುಂದೆ ನೋಡುವುದಿಲ್ಲ. 20 ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ, ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ. 21 ಅಲ್ಲಿ ಯೆಹೋವನು ಘನಹೊಂದಿದವನಾಗಿ ನದಿಸರೋವರಗಳಂತೆ ನಮ್ಮೊಂದಿಗಿರುವನು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡ ಹಡಗಾಗಲಿ ಅದನ್ನು ದಾಟುವುದಿಲ್ಲ. 22 ಏಕೆಂದರೆ ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಆಜ್ಞೆಕೊಡುವಾತನು, ಯೆಹೋವನು ನಮ್ಮ ರಾಜನು, ಆತನೇ ನಮ್ಮನ್ನು ರಕ್ಷಿಸುವನು. 23 ನಿನ್ನ ಹಗ್ಗಗಳು ಸಡಿಲವಾಗಿ ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು, ಹಾಯಿಯನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು. 24 ಚೀಯೋನಿನ ಯಾವ ನಿವಾಸಿಯೂ “ನಾನು ಅಸ್ವಸ್ಥನು” ಎಂದು ಹೇಳುವುದಿಲ್ಲ. ಅಲ್ಲಿಯ ಜನರ ಪಾಪವು ಪರಿಹಾರವಾಗುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.