ಯೆಶಾಯ 26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಸ್ತೋತ್ರಗೀತೆ 1 ಆ ದಿನದಲ್ಲಿ ಯೆಹೂದ ದೇಶದೊಳಗೆ ಈ ಗೀತೆಯನ್ನು ಹಾಡುವರು, “ನಮಗೆ ಬಲವಾದ ಪಟ್ಟಣವಿದೆ. ಯೆಹೋವನು ತನ್ನ ರಕ್ಷಣೆಯನ್ನು ಕೋಟೆಯನ್ನಾಗಿಯೂ, ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ. 2 ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಗೊಳ್ಳುವ ಜನಾಂಗವು ಒಳಗೆ ಪ್ರವೇಶಿಸಲಿ! 3 ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ. 4 ಯೆಹೋವನಲ್ಲಿ ಸದಾ ಭರವಸವಿಡಿರಿ; ಏಕೆಂದರೆ ಯೆಹೋವನೇ ಶಾಶ್ವತವಾದ ಆಶ್ರಯಗಿರಿಯಾಗಿದ್ದಾನೆ. 5 ಆತನು ಹೆಮ್ಮೆಯಿಂದ ವಾಸಿಸುವವರನ್ನು ಇಳಿಸಿದ್ದಾನೆ. ಅವರ ಉನ್ನತ ಪಟ್ಟಣವನ್ನು ತಗ್ಗಿಸಿದ್ದಾನೆ. ಅದನ್ನು ಕೆಡವಿ, ನೆಲಸಮಮಾಡಿ ಧೂಳಿಗೆ ತಂದಿದ್ದಾನೆ. 6 ಅದು ಕಾಲು ತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದು ಬಿಡುತ್ತಾರೆ. 7 ನೀತಿವಂತನ ಮಾರ್ಗವು ಸಮವಾಗಿದೆ; ನೀನು ಅವನ ದಾರಿಯನ್ನು ಸರಿಪಡಿಸಿ ನೇರಮಾಡುತ್ತಿ. 8 ಹೌದು, ಯೆಹೋವನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ ನಿನಗಾಗಿ ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಇಷ್ಟವಾಗಿದೆ, ಹಿತವಾಗಿದೆ. 9 ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡೆಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು. 10 ದುಷ್ಟರನ್ನು ಕರುಣಿಸಿದರೂ, ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥರ ದೇಶದಲ್ಲಿಯೂ ಅನ್ಯಾಯವನ್ನು ಆಚರಿಸುವರು. 11 ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನರ ಅಭಿಮಾನವನ್ನು ನೋಡಿ ನಾಚಿಕೆಪಡಲಿ; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವುದು. 12 ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ಏಕೆಂದರೆ ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದಿ. 13 ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು; ಆದರೆ ನಾವು ನಿನ್ನ ನಾಮವನ್ನೇ ಹೊಗಳುವೆವು, ಸ್ತುತಿಸುವೆವು. 14 ನೀನು ಆ ಒಡೆಯರ ಮೇಲೆ ಕೈಮಾಡಿ, ಅವರನ್ನು ನಿರ್ಮೂಲಮಾಡಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದಿ. ಸತ್ತವರು ಪುನಃ ಬದುಕುವುದಿಲ್ಲ, ಪ್ರೇತಗಳು ಎದ್ದು ಬರುವುದಿಲ್ಲ. 15 ಯೆಹೋವನೇ, ನೀನು ಜನಾಂಗವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಜನಾಂಗವನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ. 16 ಯೆಹೋವನೇ, ನಿನ್ನ ಜನರು ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಹುಡುಕಿದರು. ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿದರು. 17 ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ, ಬೇನೆಯಿಂದ ಕೂಗಿ ಅಳುವಂತೆ ಯೆಹೋವನೇ, ನಾವು ನಿನ್ನ ಮುಂದೆ ಸಹಾಯಕ್ಕಾಗಿ ಕೂಗಿ ದುಃಖಿಸಿದ್ದೇವೆ. 18 ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ. 19 ಮೃತರಾದ ನಿನ್ನ ಜನರು ಬದುಕುವರು, ನಮ್ಮ ಹೆಣಗಳು ಜೀವದಿಂದ ಏಳುವವು, ಧೂಳಿನ ನಿವಾಸಿಗಳೇ, ಎಚ್ಚರಗೊಂಡು ಹರ್ಷಧ್ವನಿಗೈಯಿರಿ! ಯೆಹೋವನೇ, ನೀನು ಸುರಿಸುವ ಇಬ್ಬನಿಯು ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಗೆ ಹಾಕುವುದು. ಯೆಹೋವನ ಶಿಕ್ಷೆ 20 ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿಕೊಂಡು ಬಾಗಿಲುಗಳನ್ನು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ. 21 ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪ ಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ಪ್ರಕಟಮಾಡುವುದು, ತನ್ನ ನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಡುವುದಿಲ್ಲ.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.