ಯೆಶಾಯ 24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಭೂಮಿಗೆ ಬರಲಿರುವ ವಿನಾಶ 1 ಇಗೋ, ಯೆಹೋವನು ಭೂಮಿಯನ್ನು ಬರಿದುಮಾಡಿ, ಎಲ್ಲಾ ಪ್ರದೇಶವನ್ನು ನಿರ್ಜನಮಾಡಿ, ಅದನ್ನು ವಿಕಾರಪಡಿಸಿ, ಅದರ ನಿವಾಸಿಗಳನ್ನು ಚದುರಿಸಿಬಿಡುವವನಾಗಿದ್ದಾನೆ. 2 ಪ್ರಜೆಗಳು ಯಾಜಕ, ದಾಸ ಯಜಮಾನ, ದಾಸಿ, ಯಜಮಾನಿ, ಕೊಳ್ಳುವವನು, ಮಾರುವವನು, ಸಾಲ ಕೊಡುವವನು ಸಾಲ ಪಡೆಯುವವನು, ಬಡ್ಡಿ ಪಡೆಯುವವನು ಬಡ್ಡಿ ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವುದು. 3 ಭೂಮಿಯು ಬಟ್ಟಬರಿದಾಗುವುದು, ಅದು ಸಂಪೂರ್ಣ ಸುಲಿಗೆಯಾಗುವುದು, ಯೆಹೋವನೇ ಇದನ್ನು ನುಡಿದಿದ್ದಾನೆ. 4 ಭೂಮಿಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿಹೋಗಿದೆ, ಲೋಕದ ಉನ್ನತರು ಕಂಗೆಟ್ಟಿದ್ದಾರೆ. 5 ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ನಿಯಮಗಳನ್ನು ಬದಲಾಯಿಸಿ, ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು. 6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ. 7 ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ. 8 ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ. 9 ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವುದು. 10 ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೋಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ. 11 ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಕೊನೆಗೊಂಡಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ. 12 ಪಟ್ಟಣಗಳು ಹಾಳೂರಾಗಿ ಉಳಿದಿದೆ; ನಾಶವು ಹೆಬ್ಬಾಗಿಲಿಗೆ ಬಡಿದಿದೆ. 13 ಎಣ್ಣೆಯ ಮರವನ್ನು ಕಡಿದ ಬಳಿಕ, ದ್ರಾಕ್ಷಿಯ ಸುಗ್ಗಿಯು ತೀರಿದ ನಂತರ ಉಳಿದ ಕಾಯಿಗಳ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಉಳಿದಿರುವುದು. 14 ಅವರು ತಮ್ಮ ಧ್ವನಿ ಎತ್ತಿ ಯೆಹೋವನ ಮಹಿಮೆಯನ್ನು ಕುರಿತು ಹಾಡುವರು. ಸಮುದ್ರದ ಕಡೆಯಿಂದ ಆರ್ಭಟಿಸುವರು. 15 ಮೂಡಣದವರೇ, “ಯೆಹೋವನನ್ನು ಸನ್ಮಾನಿಸಿರಿ. ದ್ವೀಪ ನಿವಾಸಿಗಳೇ, ಇಸ್ರಾಯೇಲರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ” ಎಂದು ಕೂಗುವರು. 16 ಭೂಮಂಡಲದ ಕಟ್ಟಕಡೆಯಿಂದ, “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿ ಬಂದಿವೆ, ಆದರೆ “ನಾನಾದರೋ ಕ್ಷಯಿಸಿ ಹೋಗಿದ್ದೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ” ಎಂದುಕೊಂಡೆನು. 17 ಭೂನಿವಾಸಿಗಳೇ, ಭಯವೂ, ಗುಂಡಿಯೂ, ಬಲೆಯೂ ನಿಮಗೆ ಕಾದಿವೆ. 18 ಭಯದ ಸಪ್ಪಳದಿಂದ ಓಡಿ ಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿ ಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ. 19 ಭೂಮಿಯು ಒಡೆದೇ ಇದೆ, ಬಿರಿದಿದೆ, ಕದಲಿಯೇ ಹೋಗಿದೆ. 20 ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಗುಡಿಸಲಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರುಗಿ ಏಳುವುದೇ ಇಲ್ಲ. 21 ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ, ಭೂಮಂಡಲದ ಒಡೆಯರನ್ನೂ ದಂಡಿಸುವನು. 22 ಅವರು ಕೈದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಲ್ಪಟ್ಟು ಅದರಲ್ಲಿ ಮುಚ್ಚಲ್ಪಡುವರು. ಬಹಳ ದಿನಗಳ ನಂತರ ದಂಡನೆಗೆ ಗುರಿಯಾಗುವರು. 23 ಆಮೇಲೆ ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್ ಪರ್ವತದಲ್ಲಿ ಯೆರೂಸಲೇಮನ್ನು ಆಳುವನು. ಆತನ ಪರಿವಾರದ ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.