ಯೆಶಾಯ 20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಐಗುಪ್ತದ ಮತ್ತು ಕೂಷಿನ ವಿಷಯವಾದ ದೈವೋಕ್ತಿ 1 ಅಶ್ಶೂರದ ರಾಜನಾದ ಸರ್ಗೋನನು ಕಳುಹಿಸಿದ ದಳವಾಯಿಯು ಅಷ್ದೋದಿಗೆ ಬಂದು ಅದರ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರಮಿಸಿಕೊಂಡನು. 2 ಅದೇ ಸಮಯದಲ್ಲಿ ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ, “ಹೋಗು, ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಪಾದರಕ್ಷೆಗಳನ್ನು ತೆಗೆದಿಡು” ಎಂದು ಹೇಳಿದನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಪಾದರಕ್ಷೆಗಳಿಲ್ಲದೆ ತಿರುಗಾಡುತ್ತಿದ್ದನು. 3 ಆಗ ಯೆಹೋವನು ಹೀಗೆ ಹೇಳಿದನು, “ನನ್ನ ಸೇವಕನಾದ ಯೆಶಾಯನು ಐಗುಪ್ತದ ಮತ್ತು ಕೂಷಿನ ನಾಶನಕ್ಕೆ ಆಶ್ಚರ್ಯವಾದ ಗುರುತಾಗಿ ಮೂರು ವರ್ಷ ಬೆತ್ತಲೆಯಾಗಿ ಪಾದರಕ್ಷೆಗಳಿಲ್ಲದೆ ನಡೆದನು.” 4 ಈ ರೀತಿಯಾಗಿ ಅಶ್ಶೂರದ ಅರಸನು ಐಗುಪ್ತದ ಸೆರೆಯವರನ್ನೂ, ಕೂಷಿನ ಕೈದಿಗಳನ್ನೂ ಅವರು ದೊಡ್ಡವರಾಗಲಿ, ಚಿಕ್ಕವರಾಗಲಿ ಬಟ್ಟೆ, ಪಾದರಕ್ಷೆಗಳಿಲ್ಲದೆ ಬೆತ್ತಲೆಯಾಗಿ ಐಗುಪ್ತದ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು. 5 ಆಗ ನನ್ನ ಜನರು ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು. 6 ಆ ದಿನದಲ್ಲಿ ಈ ತೀರದಲ್ಲಿ ವಾಸಿಸುವವರು ಹೇಳುವುದೇನೆಂದರೆ, “ಇಗೋ, ಅಶ್ಶೂರದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?” ಎಂದು ಅಂದುಕೊಳ್ಳುವರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.