Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದಮಸ್ಕದ ವಿಷಯವಾದ ದೈವೋಕ್ತಿ

1 ದಮಸ್ಕದ ವಿಷಯವಾದ ದೈವೋಕ್ತಿ. “ಆಹಾ, ದಮಸ್ಕವು ಇನ್ನು ಪಟ್ಟಣವಾಗಿರದೇ ಹಾಳು ದಿಬ್ಬವಾಗಿರುವುದು.

2 ಆರೋಯೇರಿನ ಪಟ್ಟಣಗಳು ನಿರ್ಜನವಾಗಿ, ಮಂದೆಗಳಿಗೆ ಆಸರೆಯಾಗುವವು. ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.

3 ಎಫ್ರಾಯೀಮಿಗೆ ರಕ್ಷಣೆಯಾಗಿರುವ ಕೋಟೆಯೂ, ದಮಸ್ಕವು ನಡೆಸುವ ರಾಜ್ಯಾಧಿಕಾರವೂ ಇಲ್ಲವಾಗುವವು. ಅರಾಮ್ಯರಲ್ಲಿ ಉಳಿದವರು ಇಸ್ರಾಯೇಲರ ಮಕ್ಕಳ ವೈಭವದಂತೆ ಇರುವರು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

4 “ಆ ದಿನದಲ್ಲಿ, ಯಾಕೋಬಿನ ಮಾಂಸದ ಕೊಬ್ಬು ಕರಗಿ, ಅದರ ಮಹಿಮೆಯೂ ಕ್ಷೀಣವಾಗುವುದು.

5 ಹೊಲದಲ್ಲಿ ಬೆಳೆ ಕೊಯ್ಯುವವನು ಪೈರುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವುದು. ಹೌದು, ರೆಫಾಯೀಮ್ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆ ಇರುವುದು.

6 ಆದರೂ ಎಣ್ಣೆಯ ಮರದ ಕಾಯಿಗಳನ್ನು ಉದುರಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ, ಎರಡು ಮೂರು ಕಾಯಿಗಳು, ಫಲವತ್ತಾದ ಆ ಮರದ ಕೊಂಬೆಗಳಲ್ಲೆಲ್ಲಾ ನಾಲ್ಕೈದು ಕಾಯಿಗಳು ಉಳಿದಿರುವಂತೆ ಹಕ್ಕಲುಹಣ್ಣುಗಳು ಅದರಲ್ಲಿ ಉಳಿದಿರುವುದು” ಎಂದು ಇಸ್ರಾಯೇಲರ ದೇವರಾದ ಯೆಹೋವನು ನುಡಿಯುತ್ತಾನೆ.

7 ಆ ದಿನದಲ್ಲಿ ಜನರು ತಮ್ಮ ಸೃಷ್ಟಿಕರ್ತನನ್ನೇ ದೃಷ್ಟಿಸುವರು ಮತ್ತು ಇಸ್ರಾಯೇಲಿನ ಸದಮಲಸ್ವಾಮಿಯ ಕಡೆಗೆ ಕಣ್ಣುಗಳನ್ನು ತಿರುಗಿಸುವರು.

8 ತಮ್ಮ ಕೈಯಿಂದ ಮಾಡಿದ ಬಲಿಪೀಠಗಳನ್ನು ಲಕ್ಷಿಸದೆ, ತಮ್ಮ ಬೆರಳುಗಳಿಂದ ನಿರ್ಮಿಸಿದ ಅಶೇರವೆಂಬ ವಿಗ್ರಹಸ್ತಂಭಗಳನ್ನಾಗಲಿ, ಸೂರ್ಯಸ್ತಂಭಗಳನ್ನಾಗಲಿ ದೃಷ್ಟಿಸುವುದಿಲ್ಲ.

9 ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು ಪೂರ್ವದಲ್ಲಿ ಇಸ್ರಾಯೇಲರ ಭಯದಿಂದ ನಿರ್ಜನವಾಗಿದ್ದ, ಅದು ಅಡವಿಯಲ್ಲಿಯೂ, ಬೆಟ್ಟಗಳ ತುದಿಯ ಮೇಲೂ ಕಾಣುವ ಹಾಳು ನಿವೇಶನಗಳಂತಿರುವವು, ಅಂತೂ ದೇಶವೆಲ್ಲಾ ಹಾಳಾಗಿರುವುದು.

10 ಏಕೆಂದರೆ ನೀನು ನಿನ್ನ ರಕ್ಷಕನಾದ ದೇವರನ್ನು ಮರೆತುಬಿಟ್ಟು, ನಿನ್ನ ಆಶ್ರಯಗಿರಿಯನ್ನು ಸ್ಮರಿಸಲಿಲ್ಲ. ಹೀಗಿರಲು ನೀನು ಇಷ್ಟವಾದ ದ್ರಾಕ್ಷಿಯ ಗಿಡಗಳನ್ನು ನೆಟ್ಟು, ನಿನ್ನ ದೇಶದಲ್ಲಿ ದೇಶಾಂತರದ ಸಸಿಗಳನ್ನು ನೆಟಿದ್ದಿ.

11 ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ.


ಅಶ್ಶೂರದ ವಿಷಯವಾದ ದೈವೋಕ್ತಿ

12 ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ!

13 ಹೌದು, ಮಹಾ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತಿವೆ. ಆದರೆ ಆತನು ಅವರನ್ನು ಗದರಿಸುವಾಗ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರ ಗಾಳಿಯಿಂದ ಸುತ್ತಾಡುವ ಧೂಳಿನಂತೆಯೂ ಅಟ್ಟಲ್ಪಡುವರು.

14 ಇಗೋ, ಸಂಜೆಯಲ್ಲಿ ಹೆದರಿ ಉದಯದೊಳಗಾಗಿ ಇಲ್ಲವಾಗುವರು! ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು