Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರದ ಪರ್ವತಕ್ಕೆ ಕಳುಹಿಸಿರಿ.

2 ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಜನರು ಅಲೆಯುವ ಪಕ್ಷಿಗಳಂತೆಯೂ, ಗೂಡಿನಿಂದ ಚದುರಿರುವ ಮರಿಗಳಂತೆಯೂ ಆಗುವರು.

3 ಆಲೋಚನೆ ಹೇಳಿರಿ, ತೀರ್ಮಾನಿಸಿರಿ; ನಡು ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾದ ನೆರಳನ್ನು ಕೊಡಲಿ. ನಿಮ್ಮಲ್ಲಿರುವ ದೀನದಲಿತರನ್ನು ಸಂರಕ್ಷಿಸು, ತಪ್ಪಿಸಿಕೊಂಡು ಹೋಗುವ ಜನರ ವಿಷಯವನ್ನು ಬಯಲುಮಾಡಬೇಡಿ.

4 ನಿಮ್ಮ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ; ಮೋವಾಬ್ಯರು ಬಲತ್ಕಾರಿಗಳಿಗೆ ವಶವಾಗದ ಹಾಗೆ ಆಶ್ರಯವಾಗಿರಿ. ಹಿಂಸಿಸುವವರು ನಿಮ್ಮ ದೇಶದಿಂದ ನಿರ್ಮುಲವಾಗುವರು, ನಾಶನವು ನಿಂತುಹೋಗುವುದು. ಪೀಡಿಸುವವರು ನಿಮ್ಮ ದೇಶದಿಂದ ನಿರ್ಮೂಲರಾಗುವರು.

5 ಇದಲ್ಲದೆ ಸಿಂಹಾಸನವು ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ನೀತಿನ್ಯಾಯದಿಂದ ಕುಳಿತುಕೊಳ್ಳುವನು.

6 ಮೋವಾಬ್ಯರ ಅಹಂಕಾರವನ್ನು, ಗರ್ವವನ್ನು, ಕೊಚ್ಚಿಕೊಳ್ಳುವಿಕೆಯನ್ನು, ಕೋಪವನ್ನು ನಾವು ಕೇಳಿದ್ದೇವೆ. ಅವರು ಕೊಚ್ಚಿಕೊಳ್ಳುವುದೆಲ್ಲಾ ಬರೀ ವ್ಯರ್ಥವೇ.

7 ಆದಕಾರಣ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವುದು. ಪ್ರತಿಯೊಬ್ಬನೂ ಪ್ರಲಾಪಿಸುವನು. ನೀವು ಕೀರ್ ಹರೆಷೆಥಿನ ಜನರ ದೀಪದ್ರಾಕ್ಷೆಯ ಕಡುಬು ಹಾಳಾಯಿತಲ್ಲಾ ಎಂದು ನರಳುವಿರಿ.

8 ಹೆಷ್ಬೋನಿನ ಭೂಮಿಯು, ಸಿಬ್ಮದ ದ್ರಾಕ್ಷಾಲತೆಯು ಒಣಗಿ ಹೋಗಿದೆ. ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ, ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷಿಗಳನ್ನು, ಜನಾಂಗಗಳ ಒಡೆಯರನ್ನು ತುಳಿದುಬಿಟ್ಟಿದ್ದಾನೆ.

9 ಹೀಗಿರಲು ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರಿನವರೊಂದಿಗೆ ನಾನು ಅಳುವೆನು. ಹೆಷ್ಬೋನೇ, ಎಲ್ಲಾಲೇ ನನ್ನ ಕಣ್ಣೀರಿನಿಂದ ನಿಮ್ಮನ್ನು ತೋಯಿಸುವೆನು. ನಿಮ್ಮ ಹಣ್ಣಿನ ಮೇಲೆಯೂ, ನಿಮ್ಮ ಬೆಳೆಯ ಮೇಲೆಯೂ ಬಿದ್ದು ಆರ್ಭಟಿಸುವುದನ್ನು ನಿಲ್ಲಿಸಿಬಿಟ್ಟಿದ್ದೇನೆ.

10 ಹರ್ಷಾನಂದಗಳು ತೋಟಗಳಿಂದ ತೊಲಗಿವೆ. ದ್ರಾಕ್ಷಿಯ ತೋಟಗಳಲ್ಲಿ ಉತ್ಸಾಹದ ಧ್ವನಿಯೂ, ಉಲ್ಲಾಸದ ಆರ್ಭಟವೂ ಇರುವುದಿಲ್ಲ. ತುಳಿಯುವವರು ದ್ರಾಕ್ಷಿಯ ತೊಟ್ಟಿಗಳಲ್ಲಿ ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.

11 ಆದುದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವು, ಕೀರ್ ಹೆರೆಸಿನ ನಿಮಿತ್ತ ನನ್ನ ಅಂತರಂಗವು ಕಿನ್ನರಿಯಂತೆ ಅಲುಗಿ ನುಡಿಯುತ್ತದೆ.

12 ಮೋವಾಬ್ಯರು ಸನ್ನಿಧಿಗೆ ಸೇರಿ, ದಿಣ್ಣೆಯಲ್ಲಿನ ಪೂಜೆಯಿಂದ ಬಹಳ ಆಯಾಸಗೊಂಡು ಪ್ರಾರ್ಥನೆಗಾಗಿ ತಮ್ಮ ದೇವಾಲಯಕ್ಕೆ ಬಂದರೂ ಅವರ ಪ್ರಾರ್ಥನೆಯು ಸಫಲವಾಗುವುದಿಲ್ಲ.

13 ಯೆಹೋವನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತುಗಳು ಇದೇ.

14 ಆಗ ಯೆಹೋವನು ತಿರುಗಿ ಹೇಳಿದ್ದೇನೆಂದರೆ, “ಮೂರು ವರ್ಷದೊಳಗೆ ಮೋವಾಬಿನ ವೈಭವವು ಕಣ್ಮರೆಯಾಗುವುದು. ಅವರ ದೊಡ್ಡ ಗುಂಪು ನಾಶವಾಗುವುದು ಅವರ ಜನರಲ್ಲಿ, ಉಳಿದವರು ಕೇವಲ ಚಿಕ್ಕ ಗುಂಪಾಗಿ ಬಲಹೀನರಾಗುವರು” ಎಂಬುದೇ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು