ಯೆಶಾಯ 13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಬಾಬೆಲಿನ ವಿಷಯವಾದ ದೈವೋಕ್ತಿ 1 ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡು ಬಂದ ದೈವೋಕ್ತಿ. 2 ಶತ್ರುಗಳು ಬಂದು ಪ್ರಭುಗಳ ಪುರದ್ವಾರಗಳಲ್ಲಿ ನುಗ್ಗುವಂತೆ, ಬೋಳು ಬೆಟ್ಟದ ಮೇಲೆ ಧ್ವಜವೆತ್ತಿ ಕೂಗಿರಿ, ಅವರನ್ನು ಕೈಬೀಸಿ ಕರೆಯಿರಿ. 3 ನಾನು ಆರಿಸಿಕೊಂಡ ಪರಿಶುದ್ಧರಿಗೆ ಅಪ್ಪಣೆ ಕೊಟ್ಟಿದ್ದೇನೆ. ಹೌದು, ನನ್ನ ಜಯದಲ್ಲಿ ಹೆಮ್ಮೆಪಡುವವರು, ನನ್ನ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆದಿದ್ದೇನೆ. 4 ಆಹಾ, ಬಹುಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಜನಾಂಗಗಳ ಆರ್ಭಟವು ಒಟ್ಟಿಗೆ ಕೂಡಿಕೊಂಡ ಅನೇಕ ರಾಜ್ಯಗಳ ಆರ್ಭಟದಂತೆ ಇದೆ! ಯೆಹೋವನು ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡುತ್ತಾನೆ. 5 ಯೆಹೋವನು ತಾನು ನ್ಯಾಯ ತೀರಿಸುವ ಆಯುಧಗಳೊಡನೆ ದೂರ ದೇಶದಿಂದ ಅಂದರೆ, ಆಕಾಶ ಮಂಡಲದ ಕಟ್ಟಕಡೆಯಿಂದ ಭೂಮಿಯನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾನೆ. 6 ಗೋಳಾಡಿರಿ! ಏಕೆಂದರೆ ಯೆಹೋವನ ದಿನವು ಸಮೀಪಿಸಿತು. ಅದು ಸರ್ವಶಕ್ತನಿಂದ ನಾಶವಾಗುವಂತೆ ಬರುವುದು. 7 ಆದುದರಿಂದ ಎಲ್ಲರ ಕೈಗಳು ಜೋಲು ಬೀಳುವುದು. ಎಲ್ಲರ ಹೃದಯವು ಕರಗಿ ನೀರಾಗುವುದು. 8 ಅವರು ಭಯಪಡುವರು. ಪ್ರಸವ ವೇದನೆಯಲ್ಲಿರುವ ಸ್ತ್ರೀಯಂತೆ ಯಾತನೆ, ಸಂಕಟಗಳನ್ನು ಅನುಭವಿಸುವರು. ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು. ಅವರ ಮುಖಗಳು ತಲ್ಲಣಗೊಂಡು ಬೆಂಕಿಯಿಂದ ಉರಿಯುವವು. 9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭೂಮಿಯನ್ನು ಹಾಳು ಮಾಡಿ, ಪಾಪಿಗಳನ್ನು ನಿರ್ಮೂಲಮಾಡುವುದಕ್ಕೆ ಆತನ ಕೋಪೋದ್ರೇಕದಿಂದಲೂ, ತೀಕ್ಷ್ಣವಾದ ರೋಷದಿಂದಲೂ ಕ್ರೂರವಾಗಿರುವುದು. 10 ಆಕಾಶದ ತಾರೆಗಳೂ, ನಕ್ಷತ್ರ ರಾಶಿಗಳೂ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ಪ್ರಕಾಶಿಸುವುದಿಲ್ಲ. 11 ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ, ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲಗಳಿಗಾಗಿ ಶಿಕ್ಷಿಸಿ, ಸೊಕ್ಕಿದವರ ಅಹಂಕಾರವನ್ನು ಅಡಗಿಸಿ, ಭಯಂಕರವಾದ ಅವರ ಹೆಮ್ಮೆಯನ್ನು ತಗ್ಗಿಸುವೆನು. 12 ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ ಮತ್ತು ಓಫೀರಿನ ಬಂಗಾರಕ್ಕಿಂತಲೂ ವಿರಳವಾಗುವಂತೆ ಮಾಡುವೆನು. 13 ಆದುದರಿಂದ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ತೀಕ್ಷ್ಣರೋಷದಿಂದ ಆಕಾಶಮಂಡಲವನ್ನು ನಡುಗಿಸಿ, ಭೂಲೋಕವನ್ನು ಅದರ ಸ್ಥಳದಿಂದ ಕದಲಿಸಿ ನಡುಗಿಸುವೆನು. 14 ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆಯೂ, ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನೂ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು. 15 ಸಿಕ್ಕಿದವರೆಲ್ಲರು ಇರಿಯಲ್ಪಡುವರು. ಹಿಂಬಾಲಿಸಿ ಹಿಡಿಯಲ್ಪಟ್ಟ ಸಕಲ ಜನರು ಕತ್ತಿಗೆ ತುತ್ತಾಗುವರು. 16 ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಬಿಡುವರು. ಅವರ ಮನೆಗಳನ್ನು ಸೂರೆಮಾಡುವರು. ಅವರ ಹೆಂಡತಿಯರನ್ನು ಅತ್ಯಾಚಾರಕ್ಕೆ ಗುರಿಮಾಡುವರು. 17 ಇಗೋ, ಅವರ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವೆನು. ಇವರು ಬೆಳ್ಳಿಯನ್ನು ಲಕ್ಷಿಸರು. ಬಂಗಾರವನ್ನು ಪ್ರೀತಿಸರು. 18 ಅವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು. ಇವರು ಹಸುಳೆಗಳನ್ನು ಕನಿಕರಿಸುವುದಿಲ್ಲ. ಇವರು ಮಕ್ಕಳನ್ನು ಉಳಿಸುವುದಿಲ್ಲ. 19 ರಾಜ್ಯಗಳ ಘನತೆಯೂ, ಕಸ್ದೀಯರ ಮಹಿಮೆಯ ಭೂಷಣವೂ ಆದ ಬಾಬಿಲೋನಿಗೆ, ದೇವರು ನಾಶಮಾಡಿದ ಸೊದೋಮ್ ಗೋಮೋರಗಳ ಗತಿಯೇ ಸಂಭವಿಸುವುದು. 20 ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರ ಹಾಕನು ಅಥವಾ ಕುರುಬರು ಮಂದೆಯನ್ನು ತಂಗಿಸರು. 21 ಕಾಡು ಮೃಗಗಳು ಅಲ್ಲಿ ಮಲಗುವವು. ಅವರ ಮನೆಗಳು ಗೂಬೆಗಳಿಂದ ತುಂಬಿರುವವು. ಅಲ್ಲಿ ಉಷ್ಟ್ರಪಕ್ಷಿಗಳು ವಾಸಿಸುವವು ಮತ್ತು ಕಾಡಿನ ಟಗರುಗಳು ಅಲ್ಲಿ ಕುಣಿದಾಡುವವು. 22 ಅವರ ಕೋಟೆಗಳಲ್ಲಿ ತೋಳಗಳೂ, ಅರಮನೆಗಳಲ್ಲಿ ನರಿಗಳೂ ಕೂಗುವವು. ಸಮಯವು ಹತ್ತಿರವಾಗಿದೆ. ಇನ್ನು ಆ ದಿನಗಳು ಬರುವುದಕ್ಕೆ ತಡವಾಗುವುದಿಲ್ಲ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.