Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಇಷಯನ ಬೇರಿನಿಂದ ಕೊಂಬೆ

1 ಇಷಯನ ಬೇರಿನಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಹೊರಟ ಕೊಂಬೆಯು ಫಲಿಸುವುದು.

2 ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.

3 ಆತನು ಯೆಹೋವನ ಭಯದಲ್ಲಿ ಆನಂದಿಸುವನು. ಆತನು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ. ಕಿವಿಗೆ ಬಿದ್ದಂತೆ ನಿರ್ಣಯಿಸುವುದಿಲ್ಲ.

4 ಆದರೆ ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು. ಲೋಕದ ದೀನರಿಗಾಗಿ ಧರ್ಮವನ್ನು ನಿರ್ಣಯಿಸುವನು. ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ದಂಡಿಸುವನು. ದುಷ್ಟನನ್ನು ತನ್ನ ತುಟಿಗಳ ಉಸಿರಿನಿಂದ ಕೊಲ್ಲುವನು.

5 ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.

6 ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆಮರಿಯೊಂದಿಗೆ ಮಲಗುವುದು. ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡೆಸುವುದು.

7 ಹಸುವು ಕರಡಿಯ ಸಂಗಡ ಮೇಯುವುದು; ಅವುಗಳ ಮರಿಗಳು ಜೊತೆಯಾಗಿ ಮಲಗುವವು. ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು.

8 ಮೊಲೆಕೂಸು ನಾಗರ ಹಾವಿನ ಹುತ್ತದ ಮೇಲೆ ಆಡುವುದು; ಮೊಲೆಬಿಟ್ಟ ಮಗುವು ಹಾವಿನ ಬಿಲದ ಒಳಗೆ ಕೈಹಾಕುವುದು.

9 ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.

10 ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.

11 ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೆಯ ಸಾರಿ ಕೈಹಾಕಿ, ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಸಮುದ್ರದ ಕರಾವಳಿ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.

12 ಅವನು ಜನಾಂಗಗಳಲ್ಲಿ ಧ್ವಜವನ್ನೆತ್ತಿ, ಇಸ್ರಾಯೇಲರಲ್ಲಿ ಸೆರೆಗೆ ಒಯ್ಯಲ್ಪಟ್ಟವರನ್ನೂ, ಯೆಹೂದದಿಂದ ಚದರಿದವರನ್ನೂ ಭೂಮಿಯ ನಾಲ್ಕು ಕಡೆಗಳಿಂದಲೂ ಕೂಡಿಸುವನು.

13 ಎಫ್ರಾಯೀಮಿನ ಹೊಟ್ಟೆಕಿಚ್ಚು ತೊಲಗುವುದು. ಯೆಹೂದವನ್ನು ವಿರೋಧಿಸುವವರು ನಿರ್ಮೂಲವಾಗುವರು. ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚುಪಡುವುದಿಲ್ಲ. ಯೆಹೂದವು ಎಫ್ರಾಯೀಮನ್ನು ವಿರೋಧಿಸುವುದಿಲ್ಲ.

14 ಆದರೆ ಅವರು ಪಶ್ಚಿಮದಲ್ಲಿ ಫಿಲಿಷ್ಟಿಯರ ಭುಜದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆಮಾಡುವರು. ಎದೋಮಿನ ಮತ್ತು ಮೋವಾಬಿನ ಮೇಲೆ ಕೈಮಾಡುವರು. ಅಮ್ಮೋನಿಯರು ಅವರಿಗೆ ಅಧೀನರಾಗುವರು.

15 ಆಗ ಯೆಹೋವನು ಐಗುಪ್ತ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ನಾಶಮಾಡುವನು. ಯೂಫ್ರೆಟಿಸ್ ನದಿಯ ಮೇಲೆ ಕೈ ಜಾಡಿಸಿ, ತನ್ನ ಬಿಸಿಗಾಳಿಯಿಂದ ಅದನ್ನು ಏಳು ನದಿಗಳನ್ನಾಗಿ ಒಡೆದು, ಜನರ ಪಾದರಕ್ಷೆಗಳು ನೆನೆಯದಂತೆ ಅವರನ್ನು ದಾಟಿಸುವನು.

16 ಇದಲ್ಲದೆ ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಮಾರ್ಗವು ಹೇಗೆ ಸಿದ್ಧವಾಯಿತೋ ಹಾಗೆಯೇ ಅಶ್ಶೂರದಿಂದ, ತಪ್ಪಿಸಿಕೊಂಡು ಬರುವ ಆತನ ಉಳಿದ ಜನರಿಗೆ ಆತನ ರಾಜಮಾರ್ಗವು ಸಿದ್ಧವಾಗುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು