Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅಯ್ಯೋ, ಅನ್ಯಾಯವಾದ ತೀರ್ಪುಗಳನ್ನು ತೀರಿಸಿ, ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ.

2 ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ, ದಿಕ್ಕಿಲ್ಲದವರಿಗೆ ನ್ಯಾಯವನ್ನು ತಪ್ಪಿಸಿ, ಅನಾಥರನ್ನು ಕೊಳ್ಳೆಹೊಡೆದು, ವಿಧವೆಯರನ್ನು ಸೂರೆಮಾಡಬೇಕೆಂದಿದ್ದಾರೆ.

3 ದಂಡನೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ?

4 ಕೈದಿಗಳ ಕಾಲ ಕೆಳಗೆ ಮುದುರಿಕೊಂಡು, ಹತರಾದವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ ಇಷ್ಟೆಲ್ಲಾ ನಡೆದರೂ ಯೆಹೋವನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇರುವುದು.


ಯೆಹೋವನು ಅಶ್ಶೂರದಿಂದ ತನ್ನ ಜನರನ್ನು ದಂಡಿಸುವುದು

5 ಅಯ್ಯೋ, ಅಶ್ಶೂರವೇ ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೌದ್ರವೇ.

6 ನಾನು ಅವನನ್ನು ಭ್ರಷ್ಟಜನರ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆ ಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡುವೆನು.

7 ಅವನ ಅಭಿಪ್ರಾಯವೋ, ಹಾಗಲ್ಲ. ಅನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲ ಮಾಡುವೆನೆಂಬುದೇ ಹೊರತು ಈ ಯೋಚನೆಯು ಅವನ ಮನಸ್ಸಿನಲ್ಲಿ ಇಲ್ಲವೇ ಇಲ್ಲ.

8 ಅವನು ಹೇಳುವುದೇನೆಂದರೆ, “ನನ್ನ ಅಧಿಪತಿಗಳೆಲ್ಲಾ ಅರಸರಲ್ಲವೇ?

9 ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?

10 ಯೆರೂಸಲೇಮಿನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈಮಾಡಿದಂತೆಯೇ,

11 ಸಮಾರ್ಯವನ್ನೂ, ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟ ಹಾಗೆ, ಯೆರೂಸಲೇಮನ್ನೂ ಅದರ ವಿಗ್ರಹಗಳನ್ನೂ ಕೆಡವಲಾರೆನೋ?” ಎಂಬುದೇ.

12 ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ, “ಅಶ್ಶೂರದ ರಾಜನ ಹೃದಯದ ದೊಡ್ಡಸ್ತಿಕೆಯ ಫಲಕ್ಕೂ, ಅವನ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”

13 ಏಕೆಂದರೆ ಅವನು ತನ್ನೊಳಗೆ, “ನನ್ನ ಜ್ಞಾನ, ಭುಜಬಲಗಳಿಂದಲೇ ಇದನ್ನು ಮಾಡಿದ್ದೇನೆ. ನಾನೇ ವಿವೇಕವುಳ್ಳ ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ, ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.

14 ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ. ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ. ರೆಕ್ಕೆಯಾಡಿಸಿ, ಬಾಯಿ ತೆರೆದು ಕಿಚುಗುಟ್ಟುವವರು ಯಾರೂ ಇಲ್ಲ” ಎಂದು ಅಂದುಕೊಂಡನು.

15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಕತ್ತರಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.

16 ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನು ಉಂಟುಮಾಡುವನು. ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಅಸ್ತಿವಾರಕ್ಕೆ ಹತ್ತಿಕೊಳ್ಳುವುದು.

17 ಇಸ್ರಾಯೇಲರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವುದು. ಅವರ ಪರಿಶುದ್ಧನು ಜ್ವಾಲೆಯಂತಿರುವನು. ಅದು ಒಂದೇ ದಿನದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವುದು.

18 ಅದು ದೇಹಾತ್ಮಗಳನ್ನು ಉಳಿಸದೇ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.

19 ಅದರ ವನವೃಕ್ಷಗಳ ಸಂಖ್ಯೆಯು ಒಂದು ಚಿಕ್ಕಮಗುವೂ ಸಹ ಎಣಿಸಿ ಬರೆಯುವಷ್ಟು ಕಡಿಮೆಯಾಗುವುದು.


ಅಳಿದುಳಿದ ಇಸ್ರಾಯೇಲರು

20 ಆ ದಿನದಲ್ಲಿ ಇಸ್ರಾಯೇಲರೊಳಗೆ ಉಳಿದವರು, ಯಾಕೋಬಿನ ಮನೆತನದವರಲ್ಲಿ ತಪ್ಪಿಸಿಕೊಂಡವರು ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಯೆಹೋವನೆಂಬ ಇಸ್ರಾಯೇಲರ ಸದಮಲಸ್ವಾಮಿಯನ್ನು ನಂಬಿಗಸ್ತರಾಗಿ ಆಧಾರಮಾಡಿಕೊಳ್ಳುವರು.

21 ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.

22 ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.

23 ಏಕೆಂದರೆ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಯಿಸಲ್ಪಟ್ಟ ನಾಶನವನ್ನು ಉಂಟುಮಾಡುವನು.

24 ಆದುದರಿಂದ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಐಗುಪ್ತರು ಮಾಡಿದಂತೆ, ನಿಮ್ಮನ್ನು ಕೋಲಿನಿಂದ ಹೊಡೆದು, ನಿಮ್ಮ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ.

25 ಇನ್ನು ಸ್ವಲ್ಪ ಕಾಲದೊಳಗೆ ನಿಮ್ಮ ಮೇಲಿನ ಉಗ್ರವು ತೀರಿ, ನನ್ನ ಕೋಪವು ಅವರ ನಾಶನಕ್ಕಾಗುವುದು.”

26 ಸೇನಾಧೀಶ್ವರನಾದ ಯೆಹೋವನು ಓರೇಬ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ, ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತರ ಮೇಲೆ ಎತ್ತಿದಂತೆ ಎತ್ತುವನು.

27 ಆ ದಿನದಲ್ಲಿ, ಅವರು ಹೊರಿಸಿದ ಹೊರೆಯು, ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ಕುತ್ತಿಗೆಯಿಂದಲೂ ತೊಲಗುವುದು, ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.

28 ಶತ್ರುಗಳು ಅಯ್ಯಾಥಿನ ಮೇಲೆ ದಂಡೆತ್ತಿ ಬಂದಿದ್ದಾರೆ, ಮಿಗ್ರೋನನ್ನು ಹಾದುಹೋಗಿದ್ದಾರೆ; ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ.

29 ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.

30 ಗಲ್ಲೀಮ್ ಗ್ರಾಮವೇ, ಕೂಗಿ ಅರಚಿಕೋ! ಲಯೆಷವೇ, ಕಿವಿಗೊಡು! ಅನಾತೋತೇ, ಪ್ರತಿಧ್ವನಿ ಕೊಡು!

31 ಮದ್ಮೇನ ದಿಕ್ಕಾಪಾಲಾಯಿತು. ಗೇಬೀಮಿನ ನಿವಾಸಿಗಳು ವಲಸೆ ಹೋದರು.

32 ಇದೇ ದಿನ ಶತ್ರುಗಳು ನೋಬಿನಲ್ಲಿ ಬೀಡುಬಿಡುವರು. ಚೀಯೋನ್ ನಗರಿಯ ಪರ್ವತದ ಕಡೆಗೆ ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.

33 ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸುವನು. ಅವು ಧಡಮ್ಮನೆ ಬೀಳುವವು. ಉನ್ನತವಾದ ವೃಕ್ಷಗಳು ಕಡಿದು ಕೆಳಗೆ ಬೀಳುವವು. ಎತ್ತರವಾದ ಮರಗಳು ನೆಲದ ಪಾಲಾಗುವವು.

34 ಆತನು ಅಡವಿಯ ಪೊದೆಗಳನ್ನು ಕಬ್ಬಿಣದ ಕೊಡಲಿಯಿಂದ ಕಡಿದುಬಿಡುವನು. ಲೆಬನೋನಿನ ವನವು ಬಲಿಷ್ಠನಾದವನ ಮುಂದೆ ಬಿದ್ದುಹೋಗುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು