Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 46 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಐಗುಪ್ತದ ವಿಷಯವಾದ ದೈವೋಕ್ತಿ

1 ಯೆಹೋವನು ಜನಾಂಗಗಳ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.

2 ಐಗುಪ್ತವನ್ನು ಕುರಿತದ್ದು; ಐಗುಪ್ತದ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೆಟಿಸ್ ನದಿಯ ಬಳಿ ಕರ್ಕೆಮೀಷಿನಲ್ಲಿರುವಾಗ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಆ ಸೈನ್ಯವನ್ನು ಹೊಡೆದ ವಿಷಯ:

3 “ಗುರಾಣಿ ಮತ್ತು ಖೇಡ್ಯಗಳನ್ನು ಸಿದ್ಧಮಾಡಿಕೊಂಡು ಯುದ್ಧಕ್ಕೆ ಹೊರಡಿರಿ!

4 ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಭರ್ಜಿಗಳನ್ನು ಬೆಳಗಿರಿ, ಕವಚಗಳನ್ನು ಧರಿಸಿಕೊಳ್ಳಿರಿ.

5 ಆಹಾ, ನನ್ನ ಕಣ್ಣಿಗೆ ಬಿದ್ದದ್ದೇನು? ಅವರು ಧೈರ್ಯಗೆಟ್ಟು ಬೆನ್ನುಕೊಟ್ಟಿದ್ದಾರೆ. ಅವರ ಶೂರರು ಪೆಟ್ಟುತಿಂದು ಹಿಂದಿರುಗದೆ ಓಡಿಹೋಗುತ್ತಾರೆ; ಸುತ್ತಮುತ್ತಲು ದಿಗಿಲು ಎಂದು ಯೆಹೋವನು ಅನ್ನುತ್ತಾನೆ.

6 ವೇಗಶಾಲಿಗಳೂ ಓಡಿಹೋಗಲಾರರು, ಬಲಿಷ್ಠರೂ ತಪ್ಪಿಸಿಕೊಳ್ಳಲಾರರು. ಉತ್ತರ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಹತ್ತಿರ ಎಡವಿಬಿದ್ದಿದ್ದಾರೆ.

7 ನೈಲ್ ನದಿಯಂತೆ ಉಬ್ಬಿಕೊಂಡಿರುವ ಇವರು ಯಾರು? ನೈಲ್ ನದಿಯ ಶಾಖೆಗಳ ಹಾಗೆ ತುಂಬಿತುಳುಕುವ ಈ ಪ್ರವಾಹವು ಯಾರದು?

8 ಐಗುಪ್ತವೇ ನೈಲ್ ನದಿಯಂತೆ ಉಬ್ಬಿದೆ; ಐಗುಪ್ತವೆಂಬ ಪ್ರವಾಹವೇ ನೈಲ್ ನದಿಯ ಶಾಖೆಗಳ ಹಾಗೆ ತುಂಬಿ ತುಳುಕುತ್ತದೆ; ‘ನಾನು ಉಬ್ಬಿಕೊಂಡು ಲೋಕದಲ್ಲೆಲ್ಲಾ ಹಬ್ಬುವೆನು, ಪಟ್ಟಣವನ್ನು ಪಟ್ಟಣದ ನಿವಾಸಿಗಳನ್ನು ನಾಶಮಾಡುವೆನು’ ಅಂದುಕೊಳ್ಳುತ್ತದೆ.

9 ಅಶ್ವಗಳೇ, ಕುಣಿದಾಡಿರಿ! ರಥಗಳೇ, ರಭಸವಾಗಿರಿ! ಶೂರರು ಹೊರಡಲಿ! ಖೇಡ್ಯ ಸನ್ನದ್ಧರಾದ ಕೂಷ್ಯರು, ಪೂಟ್ಯರು, ಧನುರ್ಧಾರಿಗಳಾದ ಲೂದ್ಯರು ಮುಂದೆ ಹೋಗಲಿ!

10 ಆದರೆ ಆ ಯುದ್ಧ ದಿನವು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ದಿನವಾಗಿದೆ; ಅದು ದಂಡನೆಯ ದಿನ; ಆಗ ಖಡ್ಗವು ನುಂಗಿ ತಣಿಯುವುದು, ಅವರ ರಕ್ತವನ್ನು ತುಂಬಾ ಹೀರುವುದು. ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಉತ್ತರ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಹತ್ತಿರ ಬಲಿಮಾಡಬೇಕೆಂದಿದ್ದಾನಲ್ಲಾ.

11 ಐಗುಪ್ತದ ಕುಮಾರಿಯೇ, ಯುವತಿಯೇ, ಗಿಲ್ಯಾದಿಗೆ ಹೋಗಿ ಔಷಧವನ್ನು ಸಂಪಾದಿಸು; ನೀನು ಬಗೆಬಗೆಯ ಔಷಧವನ್ನು ಉಪಯೋಗಿಸುವುದು ಪ್ರಯೋಜನವಿಲ್ಲ; ನಿನಗೆ ಗುಣವಾಗದು.

12 ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಿಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ.

13 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತ ದೇಶವನ್ನು ಹೊಡೆಯುವನು” ಎಂಬುದಾಗಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ನುಡಿದನು.

14 “ಐಗುಪ್ತದಲ್ಲಿ ಪ್ರಕಟಿಸಿರಿ, ಮಿಗ್ದೋಲ್, ತಹಪನೇಸ್, ನೋಫ್, ಎಂಬ ಪಟ್ಟಣಗಳಲ್ಲಿ ಪ್ರಚುರಪಡಿಸಿರಿ, ‘ಐಗುಪ್ತವೇ, ಸ್ಥಿರವಾಗಿ ನಿಂತುಕೊಂಡು ಸನ್ನದ್ಧವಾಗು! ಖಡ್ಗವು ನಿನ್ನ ಸುತ್ತಲು ನುಂಗಿಬಿಟ್ಟಿದೆ’ ಎಂದು ಸಾರಿರಿ.

15 ನಿನ್ನ ಬಸವ ಬಿದ್ದು ಹೋದದ್ದೇನು? ಯೆಹೋವನು ಅದನ್ನು ಕೆಡವಿದನು, ನಿಲ್ಲಲಾರದೆ ಹೋಯಿತು.

16 ಬಹು ಜನರು ಮುಗ್ಗರಿಸುವಂತೆ ಮಾಡಿದನು; ಹೌದು, ಒಬ್ಬರಿಗೊಬ್ಬರು ಮೇಲೆ ಬಿದ್ದು; ‘ನಾವು ಎದ್ದು ಜನ್ಮಭೂಮಿಗೆ ಹೊರಟು ಸ್ವಜನರನ್ನು ಸೇರಿ ಹಿಂಸೆಯ ಖಡ್ಗದಿಂದ ತಪ್ಪಿಸಿಕೊಳ್ಳೋಣ’ ಎಂದುಕೊಂಡರು.

17 ಐಗುಪ್ತದ ಅರಸನಾದ ಫರೋಹನು ಧಡಮ್ಮನೆ ಬಿದ್ದವನು, ಸದಾವಕಾಶವನ್ನು ಉಪೇಕ್ಷಿಸಿದವನು” ಎಂದು ಅಲ್ಲಿ ಕೂಗಿದರು.

18 ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಇಗೋ, ಪರ್ವತಗಳನ್ನು ಮೀರುವ ತಾಬೋರ್ ಬೆಟ್ಟದಂತೆಯೂ, ಸಮುದ್ರದಿಂದ ಎದ್ದಿರುವ ಕರ್ಮೆಲ್ ಬೆಟ್ಟದ ಹಾಗೂ ಉನ್ನತನಾದವನೊಬ್ಬನು ಬರುವನು.

19 ಐಗುಪ್ತದಲ್ಲಿ ವಾಸಿಸುವ ಯುವತಿಯೇ, ಸೆರೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೋ; ನೋಫ್ ಪಟ್ಟಣವು ಹಾಳಾಗಿ ಸುಟ್ಟು ನಿರ್ಜನವಾಗುವುದು.

20 ಐಗುಪ್ತವು ಅಂದವಾದ ಕಡಸಾಗಿದೆ; ತೊಣಚೆಯ ಹುಳಗಳು ಉತ್ತರ ದಿಕ್ಕಿನಿಂದ ಅದರ ಮೇಲೆ ಬಂದಿದೆ.

21 ಸಂಬಳಕ್ಕಾಗಿ ಐಗುಪ್ತವನ್ನು ಸೇರಿರುವ ದಂಡಾಳುಗಳು ಕೊಬ್ಬಿದ ಕರುಗಳಂತಿದ್ದಾರೆ; ಅವರೂ ಬೆನ್ನುಕೊಟ್ಟು ಓಡಿಹೋಗಿದ್ದಾರೆ; ನಿಲ್ಲಲೇ ಇಲ್ಲ. ಅವರಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.

22 ಐಗುಪ್ತವು ಓಡಿಹೋಗುವ ಶಬ್ದವು ಸರಿಯುವ ಸರ್ಪದ ಸಪ್ಪಳಕ್ಕೆ ಸಮನಾಗಿರುವುದು; ಶತ್ರುಗಳು ದಂಡೆತ್ತಿಬಂದು ಕಟ್ಟಿಗೆ ಕಡಿಯುವವರಂತೆ ಕೊಡಲಿಗಳಿಂದ ಅವರ ಮೇಲೆ ಬೀಳುವರು.

23 ಅವರು ಮಿಡತೆಗಳಿಗಿಂತಲೂ ಅಸಂಖ್ಯಾತರಾಗಿ ದಾಟಲಾಗದ ಐಗುಪ್ತದ ದಟ್ಟವಾದ ಕಾಡನ್ನು ಕಡಿದುಹಾಕುವರು, ಇದು ಯೆಹೋವನ ನುಡಿ.

24 ಐಗುಪ್ತವೆಂಬ ಯುವತಿಯು ಅವಮಾನಕ್ಕೆ ಗುರಿಯಾಗುವಳು; ಉತ್ತರ ದಿಕ್ಕಿನವರ ಕೈವಶವಾಗುವಳು” ಎಂಬುದೇ.

25 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ನೋ ಎಂಬ ಪಟ್ಟಣದಲ್ಲಿನ ಆಮೋನ್ ದೇವತೆ, ಫರೋಹ, ಐಗುಪ್ತ, ಐಗುಪ್ತದ ದೇವತೆಗಳು, ಅಲ್ಲಿನ ಅರಸರು, ಅಂತು ಫರೋಹನನ್ನೂ, ಅವನಲ್ಲಿ ನಂಬಿಕೆಯಿಟ್ಟವರನ್ನೂ ದಂಡಿಸುವೆನು.

26 ಅವರ ಪ್ರಾಣವನ್ನು ಹುಡುಕುವ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಕೊಟ್ಟುಬಿಡುವೆನು; ಅನಂತರ ಅಲ್ಲಿ ಪೂರ್ವಕಾಲದ ಹಾಗೆ ಜನರು ವಾಸಿಸುವರು. ಇದು ಯೆಹೋವನ ನುಡಿ.

27 ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ, ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.

28 ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದ್ದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು. ಮಿತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವುದಿಲ್ಲ. ಇದು ಯೆಹೋವನ ನುಡಿ.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು