ಯೆರೆಮೀಯ 39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆರೂಸಲೇಮಿನ ಪತನ 1 ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು. 2 ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನದಲ್ಲಿ ಪೌಳಿಗೋಡೆ ಒಡಕು ಬಿದ್ದು ಯೆರೂಸಲೇಮ್ ಪಟ್ಟಣವು ಶತ್ರುವಶವಾಯಿತು. 3 ಆಗ ನೇರ್ಗಲ್ ಸರೆಚರ್, ಸಮ್ಗರ್ ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು. 4 ಯೆಹೂದದ ಅರಸನಾದ ಚಿದ್ಕೀಯನೂ ಮತ್ತು ಸಮಸ್ತ ಸೈನಿಕರೂ ಇವರನ್ನು ನೋಡಿ ಅದೇ ರಾತ್ರಿಯಲ್ಲಿ ಹೊರಟು ಅರಸನ ಉದ್ಯಾನದ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ಪಟ್ಟಣವನ್ನು ಬಿಟ್ಟು ಅರಾಬಾ ಎಂಬ ತಗ್ಗಾದ ಪ್ರದೇಶದ ಕಡೆಗೆ ಪಲಾಯನ ಮಾಡಿದರು. 5 ಕಸ್ದೀಯರ ಸೈನಿಕರು ಅವರನ್ನು ಹಿಂದಟ್ಟುತ್ತಾ ಯೆರಿಕೋವಿನ ಬಯಲಿನಲ್ಲಿ ಚಿದ್ಕೀಯನನ್ನು ಹಿಡಿದು ಹಮಾತ್ ಸೀಮೆಯ ರಿಬ್ಲದಲ್ಲಿದ್ದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಬಂದರು. 6 ಆ ಬಾಬೆಲಿನ ಅರಸನು ಅಲ್ಲಿ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ರಿಬ್ಲದಲ್ಲಿ ಅಲ್ಲೇ ಅವನ ಕಣ್ಣೆದುರಿಗೆ ವಧಿಸಿ ಯೆಹೂದದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು. 7 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ ಅವನನ್ನು ಬಾಬಿಲೋನಿಗೆ ಸಾಗಿಸಬೇಕೆಂದು ಬೇಡಿಹಾಕಿಸಿದನು. 8 ಮತ್ತು ಕಸ್ದೀಯರು ಅರಮನೆಯನ್ನೂ, ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು, ಯೆರೂಸಲೇಮಿನ ಸುತ್ತಣ ಗೋಡೆಗಳನ್ನು ಕೆಡವಿದರು. 9 ಆಗ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆಹೊಕ್ಕವರನ್ನೂ, ಇತರ ಸಮಸ್ತ ಜನರನ್ನೂ ಬಾಬಿಲೋನಿಗೆ ಸೆರೆಯೊಯ್ದನು. 10 ಆದರೆ ಏನೂ ಇಲ್ಲದ ಕೆಲವು ಬಡ ಜನರನ್ನು ಯೆಹೂದ ದೇಶದಲ್ಲಿ ಬಿಟ್ಟು ಆಗಲೇ ಅವರಿಗೆ ಹೊಲ ಮತ್ತು ದ್ರಾಕ್ಷಿತೋಟಗಳನ್ನು ಕೊಟ್ಟನು. ಕಸ್ದೀಯರ ಮುಖ್ಯಾಧಿಕಾರಿಗಳು ಯೆರೆಮೀಯನನ್ನು ಕಾಪಾಡಿದ್ದು 11 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೆಮೀಯನ ವಿಷಯವಾಗಿ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನಿಗೆ, 12 “ಅವನನ್ನು ಕರೆಯಿಸಿಕೊಂಡು ಏನೂ ಕೇಡುಮಾಡದೆ ಅವನು ಬೇಡುವುದನ್ನೆಲ್ಲಾ ನೆರವೇರಿಸಿ ಕಟಾಕ್ಷಿಸು” ಎಂದು ಅಪ್ಪಣೆಕೊಟ್ಟನು. 13 ಅದಕ್ಕೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನ್, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳು, 14 ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಕರೆತರಿಸಿ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ಎಂದಿನಂತೆ ಜನರ ಮಧ್ಯದಲ್ಲಿ ವಾಸಿಸಿದನು. ಎಬೆದ್ಮೆಲೆಕನಿಗೆ ಆದ ವಾಗ್ದಾನ 15 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಯೆಹೋವನು ಅವನಿಗೆ ಈ ಮಾತನ್ನು ದಯಪಾಲಿಸಿದನು, 16 “ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನಿಗೆ ಹೀಗೆ ಹೇಳು, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನುಡಿದ ಮೇಲನ್ನಲ್ಲ, ನುಡಿದ ಕೇಡನ್ನೇ ಈ ಪಟ್ಟಣದ ಮೇಲೆ ಬರಮಾಡುವೆನು; ಅದು ಆ ದಿನದಲ್ಲಿ ನಿನ್ನ ಕಣ್ಣೆದುರಿಗೆ ಆಗುವುದು. 17 ಯೆಹೋವನು ಇಂತೆನ್ನುತ್ತಾನೆ, ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವುದಿಲ್ಲ. 18 ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು; ನೀನು ಖಡ್ಗಕ್ಕೆ ತುತ್ತಾಗದೆ ಅದರ ಬಾಯೊಳಗಿಂದ ನಿನ್ನ ಪ್ರಾಣವನ್ನು ಸೆಳೆದುಕೊಂಡು ಹೋಗುವಿ; ಇದು ಯೆಹೋವನ ನುಡಿ’” ಎಂಬುದೇ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.