ಯೆರೆಮೀಯ 37 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಚಿದ್ಕೀಯನು ಯೆರೆಮೀಯನಿಗೆ ಮಾಡಿದ ಮನವಿ 1 ಯೋಷೀಯನ ಮಗನಾದ ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಪಟ್ಟಕ್ಕೆ ತರಲ್ಪಟ್ಟು ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. 2 ಆಗ ಅವನಾಗಲಿ, ಅವನ ಸೇವಕರಾಗಲಿ ಅಥವಾ ದೇಶದ ಜನರಾಗಲಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆ ಹೋದರು. 3 ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲ, ಯಾಜಕ ಮಾಸೇಯನ ಮಗನಾದ ಚೆಫನ್ಯ ಇವರ ಮೂಲಕ, “ದಯಮಾಡಿ ನಮಗಾಗಿ ನಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ಪ್ರವಾದಿಯಾದ ಯೆರೆಮೀಯನಿಗೆ ಹೇಳಿಕಳುಹಿಸಿದನು. 4 ಆ ಕಾಲದಲ್ಲಿ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ; ಜನರಲ್ಲಿ ಹೋಗುತ್ತಾ ಬರುತ್ತಾ ಇದ್ದನು. 5 ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು. 6 ಹೀಗಿರಲು ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು. 7 “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನನ್ನನ್ನು ವಿಚಾರಿಸುವುದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ, ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವುದು. 8 ಕಸ್ದೀಯರು ಪುನಃ ಬಂದು ಈ ಪಟ್ಟಣದ ವಿರುದ್ಧವಾಗಿ ಹೋರಾಡಿ, ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಡುವರು’” ಎಂಬುದು. 9 ಯೆಹೋವನು ಇಂತೆನ್ನುತ್ತಾನೆ, “ಕಸ್ದೀಯರು ನಮ್ಮಿಂದ ತೊಲಗಿ ಹೋಗುವುದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವುದೇ ಇಲ್ಲ. 10 ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದು ಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟು ಬಿಡುತ್ತಿದ್ದರು.” ಪ್ರಧಾನರು ಯೆರೆಮೀಯನನ್ನು ಸೆರೆಗೆ ಹಾಕಿಸಿದ್ದು 11 ಕಸ್ದೀಯರ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಯೆರೂಸಲೇಮನ್ನು ಬಿಟ್ಟುಹೋದರು. 12 ಆಮೇಲೆ ಯೆರೆಮೀಯನು ಬೆನ್ಯಾಮೀನ್ ಸೀಮೆಯಲ್ಲಿ ತನಗೆ ಬರಬೇಕಾದ ಸ್ವತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಯೆರೂಸಲೇಮಿನಿಂದ ಹೊರಟನು. 13 ಅವನು ಬೆನ್ಯಾಮೀನಿನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆಯ ವಿಚಾರಕನಾಗಿದ್ದು ಪ್ರವಾದಿಯಾದ ಯೆರೆಮೀಯನನ್ನು ಹಿಡಿದು, “ನೀನು ಕಸ್ದೀಯರಲ್ಲಿ ಮೊರೆಹೋಗಲು ಹೋಗುತ್ತಿದ್ದಿ” ಎಂದು ಹೇಳಿದನು. 14 ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಕಸ್ದೀಯರಲ್ಲಿ ಮೊರೆಹೋಗುವವನಲ್ಲ” ಎನ್ನಲು ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಹಿಡಿದು ಪ್ರಧಾನರ ಬಳಿಗೆ ಕರೆತಂದನು. 15 ಆ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕನಾದ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು. 16 ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿನಗಳು ಇದ್ದನು. 17 ಆಮೇಲೆ ಅರಸನಾದ ಚಿದ್ಕೀಯನು ಅವನನ್ನು ಕರೆಕಳುಹಿಸಿ, “ಯೆಹೋವನಿಂದ ದೈವೋಕ್ತಿಯು ದೊರೆಯಿತೋ?” ಎಂದು ತನ್ನ ಮನೆಯಲ್ಲಿ ರಹಸ್ಯವಾಗಿ ವಿಚಾರಿಸಲು ಯೆರೆಮೀಯನು, “ಹೌದು, ದೊರೆಯಿತು, ನೀನು ಬಾಬೆಲಿನ ಅರಸನ ಕೈಯಲ್ಲಿ ಸಿಕ್ಕಿಬೀಳುವಿ” ಅಂದನು. 18 ಅಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿಸಿದ್ದಕ್ಕೆ ನಾನು ನಿನಗಾಗಲಿ, ನಿನ್ನ ಸೇವಕರಿಗಾಗಲಿ ಅಥವಾ ಈ ಜನರಿಗಾಗಲಿ ಯಾವ ಅಪರಾಧವನ್ನು ಮಾಡಿದೆನು? 19 ಬಾಬೆಲಿನ ಅರಸನು ನಿಮಗೂ ಈ ದೇಶಕ್ಕೂ ವಿರುದ್ಧವಾಗಿ ಬರುವುದಿಲ್ಲ ಎಂದು ನಿಮಗೆ ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? 20 ಎನ್ನೊಡೆಯನೇ, ಅರಸನೇ, ಈಗ ದಯಮಾಡಿ ಲಾಲಿಸು; ಲೇಖಕನಾದ ಯೆಹೋನಾಥಾನನ ಮನೆಗೆ ನನ್ನನ್ನು ತಿರುಗಿ ಸೇರಿಸಬೇಡ, ಅಲ್ಲೇ ಸತ್ತೇನು, ನನ್ನ ಬಿನ್ನಹವು ನಿನಗೆ ಮುಟ್ಟಲಿ” ಎಂದು ಅರಿಕೆಮಾಡಿದನು. 21 ಅರಸನಾದ ಚಿದ್ಕೀಯನು ಇದನ್ನು ಕೇಳಿ ಅಪ್ಪಣೆ ಕೊಡಲು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಟ್ಟು, ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡುತ್ತಿದ್ದರು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.