Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 34 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೆಮೀಯನು ಅನುಭವಿಸಿದ ಹಿಂಸೆಗಳೂ ಮಾಡಿದ ಪ್ರವಾದನೆಗಳೂ ಯೆರೆಮೀಯನು ಚಿದ್ಕೀಯನನ್ನು ಎಚ್ಚರಿಸಿದ್ದು

1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು, ಅವನ ಪೂರ್ಣಸೈನ್ಯವು, ಅವನ ಕೈಕೆಳಗಿನ ಸಮಸ್ತ ಭೂರಾಜ್ಯಗಳು, ಸಕಲ ಜನಗಳು, ಇವೆಲ್ಲಾ ಯೆರೂಸಲೇಮಿಗೂ ಅದಕ್ಕೆ ಸೇರಿದ ಎಲ್ಲಾ ಊರುಗಳಿಗೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು.

2 ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನೀನು ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು, ‘ಯೆಹೋವನ ಮಾತನ್ನು ಆಲಿಸು, ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈವಶಮಾಡುವೆನು, ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.

3 ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಹಿಡಿಯಲ್ಪಟ್ಟು ಅವನ ವಶವಾಗುವಿ; ಬಾಬೆಲಿನ ಅರಸನ ಸಮಕ್ಷಮದಲ್ಲಿ ನಿಲ್ಲುವಿ; ಅವನು ನಿನ್ನ ಸಂಗಡ ಎದುರೆದುರಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಗಡಿ ಪಾರಾಗುವಿ.

4 ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವನ ಮಾತನ್ನು ಕೈಗೊಳ್ಳು; ಯೆಹೋವನು ನಿನ್ನ ವಿಷಯವಾಗಿ ಇಂತೆನ್ನುತ್ತಾನೆ, ನೀನು ಕೇಳಿ ಕೈಕೊಂಡರೆ ಖಡ್ಗದಿಂದ ಹತನಾಗುವುದಿಲ್ಲ; ಸುಖವಾಗಿ ಸಾಯುವಿ.

5 ನಿನಗಿಂತ ಮುಂಚಿನ ನಿನ್ನ ಪೂರ್ವಿಕರಾದ ಅರಸರಿಗೆ ಧೂಪಹಾಕಿದ ಪ್ರಕಾರ ನಿನಗೂ ಹಾಕುವರು; ಅಯ್ಯೋ, ಪ್ರಭುವೇ ಎಂದು ನಿನಗಾಗಿ ಗೋಳಾಡುವರು; ನಾನೇ ನುಡಿದಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ’” ಎಂದನು.

6 ಆಗ ಪ್ರವಾದಿಯಾದ ಯೆರೆಮೀಯನು ಈ ಮಾತುಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.

7 ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೂ, ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಾಗಿ ಉಳಿದಿದ್ದ ಲಾಕೀಷಿಗೂ ಮತ್ತು ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು.


ಯೆರೆಮೀಯನು ಯೆರೂಸಲೇಮಿನವರನ್ನು ಖಂಡಿಸಿದ್ದು

8 ಆ ಮೇಲೆ ಯೆಹೋವನು ಯೆರೆಮೀಯನಿಗೆ ಒಂದು ಮಾತನ್ನು ದಯಪಾಲಿಸಿದನು. ಇಷ್ಟರೊಳಗೆ ಅರಸನಾದ ಚಿದ್ಕೀಯನು ಯೆರೂಸಲೇಮಿನವರೆಲ್ಲರೊಂದಿಗೆ ಸೇರಿ,

9 “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ದಾಸ ದಾಸಿಯರೊಳಗೆ ಇಬ್ರಿಯರನ್ನು ಬಿಡುಗಡೆಮಾಡುವನು; ಯಾರೂ ತನ್ನ ಸಹೋದರನಾದ ಯೆಹೂದ್ಯನಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ” ಎಂದು ಅವರಿಗೆ ವಿಮೋಚನೆಯನ್ನು ಪ್ರಕಟಿಸುವ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು.

10 ಆಗ ತಾವು ತಮ್ಮ ತಮ್ಮ ದಾಸ, ದಾಸಿಯರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ ಎಂದು ಒಡಂಬಡಿಕೆಗೆ ಒಪ್ಪಿಕೊಂಡ ಸಕಲ ಪ್ರಧಾನರೂ ಮತ್ತು ಸಮಸ್ತ ಪ್ರಜೆಗಳೂ ಅದರಂತೆ ನಡೆದು ಅವರನ್ನು ವಿಮೋಚಿಸಿದರು.

11 ಆದರೆ ಸ್ವಲ್ಪ ಸಮಯವಾದ ಮೇಲೆ ಮನಸ್ಸನ್ನು ಬೇರೆ ಮಾಡಿಕೊಂಡು ತಾವು ಬಿಟ್ಟಿದ್ದವರನ್ನು ಪುನಃ ದಾಸ, ದಾಸಿಯರನ್ನಾಗಿ ಅಧೀನಮಾಡಿಕೊಂಡರು.

12 ಹೀಗಿರಲು ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,

13 “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮ ಪೂರ್ವಿಕರನ್ನು ನಾನು ಅಲ್ಲಿಂದ ಕರೆತಂದಾಗ

14 ‘ನಿಮ್ಮಲ್ಲಿ ಪ್ರತಿಯೊಬ್ಬನು ನಿಮಗೆ ಆರು ವರ್ಷಗಳ ಕಾಲ ದಾಸನಾಗಿದ್ದು ನಿಮಗೆ ಸೇವೆ ಮಾಡಿದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಬೇಕು’ ಎಂದು ವಿಧಿಸಿ, ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ.

15 ನೀವೋ ಈಗಲೇ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ವಿಮೋಚನೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರವಾಗಿ ನಡೆದಿರಿ. ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ ನನ್ನ ಮುಂದೆ ಒಡಂಬಡಿಕೆ ಮಾಡಿಕೊಂಡಿರಿ.

16 ಆ ಮೇಲೆ ನೀವು ಮನಸ್ಸನ್ನು ಬೇರೆ ಮಾಡಿಕೊಂಡಿರಿ; ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು ಅಧೀನಮಾಡಿಕೊಂಡು ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದಿರಿ” ಎಂಬುದೇ.

17 ಆದಕಾರಣ ಯೆಹೋವನು, “ನೀವು ನನ್ನನ್ನು ಕೇಳಲಿಲ್ಲ, ನಿಮ್ಮ ನಿಮ್ಮ ಸಹೋದರರಿಗೂ, ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ; ಇದೇ ಯೆಹೋವನ ನುಡಿ. ಇಗೋ, ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ; ನಿಮ್ಮನ್ನು ಖಡ್ಗ, ವ್ಯಾಧಿ ಮತ್ತು ಕ್ಷಾಮಗಳಿಗೆ ಗುರಿಮಾಡುತ್ತೇನೆ; ನಿಮ್ಮನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.

18 ನನ್ನ ನಿಬಂಧನೆಗಳನ್ನು ಕೈಗೊಳ್ಳದೆ, ನನ್ನ ಮುಂದೆ ಮಾಡಿದ ಒಡಂಬಡಿಕೆಯನ್ನು ಮೀರಿದವರಿಗೆ ಕರುವನ್ನು ಸೀಳಿ ಅದರ ಹೋಳುಗಳ ನಡುವೆ ಹಾದುಹೋಗುವ ಗತಿ ಬರುವಂತೆ ಮಾಡುವೆನು.

19 ನನ್ನ ಒಡಂಬಡಿಕೆಯನ್ನು ಮೀರಿದ ಯೆಹೂದದ ಪ್ರಧಾನರು, ಯೆರೂಸಲೇಮಿನ ಪ್ರಧಾನರು, ಕಂಚುಕಿಗಳು, ಯಾಜಕರು,

20 ಕರುವಿನ ಹೋಳುಗಳ ನಡುವೆ ಹಾದುಹೋದ ದೇಶದ ಸಕಲ ಜನರು, ಇವರೆಲ್ಲರನ್ನೂ ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇವರ ಹೆಣಗಳು ಆಕಾಶ ಪಕ್ಷಿಗಳಿಗೂ, ಭೂಜಂತುಗಳಿಗೂ ಆಹಾರವಾಗುವವು.

21 ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು” ಎನ್ನುತ್ತಾನೆ.

22 ಯೆಹೋವನು, “ಇಗೋ, ನಾನು ಅಪ್ಪಣೆಕೊಟ್ಟು ಆ ಶತ್ರುಗಳು ಈ ಪಟ್ಟಣಕ್ಕೆ ಹಿಂದಿರುಗುವಂತೆ ಮಾಡುವೆನು; ಅವರು ಅದಕ್ಕೆ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಬಿಡುವರು; ನಾನು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ನುಡಿಯುತ್ತಾನೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು