ಯೆರೆಮೀಯ 30 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಸುಸ್ಥಿತಿಗೆ ತರುವ ವಾಗ್ದಾನ 1 ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು, 2 “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ನೀನು ಗ್ರಂಥವಾಗಿ ಬರೆ. 3 ಇಗೋ, ನಾನು ನನ್ನ ಜನರಾದ ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪೂರ್ವಿಕರಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ” ಎಂಬುದೇ. ಇಸ್ರಾಯೇಲಿಗೆ ಸಂಭವಿಸುವ ಬಾಧೆಯೂ ಉದ್ಧಾರವೂ 4 ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು, 5 “ಯೆಹೋವನು ಇಂತೆನ್ನುತ್ತಾನೆ, ಭೀತಿಯಿಂದಾಗುವ ಶಬ್ದವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ; 6 ವಿಚಾರಿಸಿ ನೋಡಿರಿ, ಗಂಡಸು ಪ್ರಸವವೇದನೆ ಪಡುವುದುಂಟೆ? ಪ್ರತಿಯೊಬ್ಬನು ಹೆರುವವಳಂತೆ ಸೊಂಟವನ್ನು ಹಿಸಕಿಕೊಳ್ಳುವುದು, ಎಲ್ಲಾ ಮುಖಗಳು ಬಿಳಿಚಿಕೊಂಡಿರುವುದು, ಇವು ಏಕೆ ನನ್ನ ಕಣ್ಣಿಗೆ ಬೀಳುತ್ತವೆ? 7 ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.” 8 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಆ ದಿನದಲ್ಲಿ ಅವರ ಮೇಲೆ ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು, ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು. 9 ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ, ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.” 10 ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು. ಯಾಕೋಬನು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.” 11 ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ರಕ್ಷಿಸಲು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಓಡಿಸಿಬಿಟ್ಟು ಚದರಿಸಿದೆನೋ, ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು. ನಿನ್ನನ್ನೋ ನಿರ್ಮೂಲಮಾಡೆನು; ನಿನ್ನನ್ನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡುವುದಿಲ್ಲ.” ಹಾಳಾಗಿ ಹೋದ ಚೀಯೋನನ್ನು ಯೆಹೋವನು ಉನ್ನತಿಗೆ ತರುವುದು 12 ಯೆಹೋವನು ಇಂತೆನ್ನುತ್ತಾನೆ, “ನಿನ್ನ ಗಾಯವು ಗುಣಹೊಂದುವುದಿಲ್ಲ, ನಿನ್ನ ಬಾಸುಂಡೆಯು ಘೋರವಾಗಿದೆ. 13 ನಿನ್ನ ಪಾಲಿಗೆ ಯಾರೂ ಇಲ್ಲ, ನಿನ್ನ ಹುಣ್ಣಿಗೆ ಔಷಧವಿಲ್ಲ, ನಿನಗೆ ವಾಸಿಯಾಗುವುದಿಲ್ಲ. 14 ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು. 15 ಅಯ್ಯೋ, ನೋವು ನಿಲ್ಲದು ಎಂದು ನಿನ್ನ ಪೆಟ್ಟಿಗಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು. 16 ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳಲ್ಲಿ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.” 17 ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.” 18 ಯೆಹೋವನು ಹೀಗೆನ್ನುತ್ತಾನೆ, “ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ, ಅದರ ನಿವಾಸಗಳನ್ನು ಕರುಣಿಸುವೆನು. ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವುದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವುದು. 19 ಅವುಗಳೊಳಗಿಂದ ಸ್ತೋತ್ರವೂ ಮತ್ತು ಸಂತೋಷದಿಂದ ನಲಿಯುವ ಧ್ವನಿಯೂ ಕೇಳಿಸುವವು. ನಾನು ಆ ಜನರನ್ನು ಹೆಚ್ಚಿಸುವೆನು, ಅವರು ಇನ್ನು ಅಲ್ಪರಾಗಿರರು, ಅವರನ್ನು ಘನಪಡಿಸುವೆನು, ಅವರು ಇನ್ನು ಹೀನರಾಗಿರರು. 20 ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವುದು, ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವುದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು. 21 ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು. ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು. ನನ್ನನ್ನು ಸಮೀಪಿಸುವುದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.” 22 ನೀವು ನನ್ನ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು. ಯೆಹೋವನ ರೋಷವೆಂಬ ಬಿರುಗಾಳಿ 23 ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು. 24 ಯೆಹೋವನು ತನ್ನ ಹೃದಯಾಲೋಚನೆಯನ್ನು ಕಾರ್ಯಗತಗೊಳಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು, ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.