Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೆಮೀಯನು ಹನನ್ಯನನ್ನು ಗದರಿಸಿದ್ದು

1 ಅದೇ ವರ್ಷದಲ್ಲಿ, ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ, ಅಂದರೆ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ, ಪ್ರವಾದಿಯಾದ ಅಜ್ಜೂರನ ಮಗನೂ ಗಿಬ್ಯೋನ್ ಊರಿನವನೂ ಆದ ಹನನ್ಯನು ಯೆಹೋವನ ಆಲಯದೊಳಗೆ ಯಾಜಕರ ಮತ್ತು ಸಕಲಜನರ ಎದುರಿನಲ್ಲಿ ನನಗೆ ಹೀಗೆ ಹೇಳಿದನು,

2 “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ಬಾಬೆಲಿನ ಅರಸರು ನಿಮಗೆ ಹೇರಿರುವ ನೊಗವನ್ನು ಮುರಿದುಬಿಟ್ಟಿದ್ದೇನೆ.

3 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ತೆಗೆದು ಬಾಬಿಲೋನಿಗೆ ಒಯ್ದ ಯೆಹೋವನ ಆಲಯದ ಸಕಲ ಉಪಕರಣಗಳನ್ನು ಎರಡು ವರ್ಷಗಳೊಳಗಾಗಿ ನಾನು ಪುನಃ ಈ ಸ್ಥಳಕ್ಕೆ ಸೇರಿಸುವೆನು.

4 “‘ಮತ್ತು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಬಾಬಿಲೋನಿಗೆ ಸೆರೆಹೋದ ಎಲ್ಲಾ ಯೆಹೂದ್ಯರನ್ನೂ ಈ ಸ್ಥಳಕ್ಕೆ ತಿರುಗಿ ಬರಮಾಡುವೆನು. ಬಾಬೆಲಿನ ಅರಸನು ನಿಮಗೆ ಹೇರಿರುವ ನೊಗವನ್ನು ನಾನು ಮುರಿದುಬಿಡುವೆನು. ಇದು ಯೆಹೋವನ ನುಡಿ.’”

5 ಆಗ ಪ್ರವಾದಿಯಾದ ಯೆರೆಮೀಯನು ಯೆಹೋವನ ಆಲಯದೊಳಗೆ ನಿಂತಿದ್ದ ಯಾಜಕರ ಮತ್ತು ಸಕಲಜನರ ಎದುರಿನಲ್ಲಿ ಪ್ರವಾದಿಯಾದ ಹನನ್ಯನಿಗೆ,

6 “ಹಾಗೆಯೇ ಆಗಲಿ, ಯೆಹೋವನು ಹಾಗೆಯೇ ಮಾಡಲಿ! ಯೆಹೋವನು ತನ್ನ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬೆಲಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಿ ನೀನು ನುಡಿದ ಮಾತುಗಳನ್ನು ನೆರವೇರಿಸಲಿ!

7 ಆದರೆ ನಾನು ನಿನ್ನ ಮತ್ತು ಸಕಲ ಜನರ ಕಿವಿಗೆ ಬೀಳುವಂತೆ ನುಡಿಯುವ ಈ ಮಾತನ್ನು ಕೇಳು,

8 ನನಗೂ ನಿನಗೂ ಮುಂಚೆ ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ವಿಪತ್ತು, ವ್ಯಾಧಿ, ಇವುಗಳ ವಿಷಯವಾಗಿ ಸಾರುತ್ತಿದ್ದರಷ್ಟೆ.

9 ಹಿತ ಸಮಾಚಾರವನ್ನು ಸಾರುವ ಪ್ರವಾದಿಯೋ ಯೆಹೋವನಿಂದ ನಿಜವಾಗಿ ಕಳುಹಿಸಲ್ಪಟ್ಟವನೆಂದು ಅವನ ಮಾತು ಕೈಗೂಡಿದ ಮೇಲೇ ತಿಳಿಯತಕ್ಕದ್ದು” ಎಂದು ಹೇಳಿದನು.

10 ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದುಹಾಕಿ ಎಲ್ಲಾ ಜನರ ಎದುರಿಗೆ,

11 “ಯೆಹೋವನು ಹೇಳಿರುವುದೇನೆಂದರೆ, ನಾನು ಹೀಗೆಯೇ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರ್ಷದೊಳಗಾಗಿ ಸಮಸ್ತ ಜನಾಂಗಗಳ ಹೆಗಲಿನಿಂದ ತೆಗೆದು ಮುರಿದು ಹಾಕುವೆನು” ಎಂದು ಹೇಳಿದನು. ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅಲ್ಲಿಂದ ಹೊರಟುಹೋದನು.

12 ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದ ಮೇಲೆ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು.

13 “ನೀನು ಹೋಗಿ ಹನನ್ಯನಿಗೆ, ಯೆಹೋವನು ಹೀಗೆ ಹೇಳುತ್ತಾನೆ, ‘ನೀನು ಮರದ ನೊಗಗಳನ್ನು ಮುರಿದುಬಿಟ್ಟೆ, ಅವುಗಳಿಗೆ ಬದಲಾಗಿ

14 ಕಬ್ಬಿಣದ ನೊಗಗಳನ್ನು ಮಾಡು, ಏಕೆಂದರೆ ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಈ ಎಲ್ಲಾ ಜನಾಂಗಗಳು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಸೇವಿಸಲೆಂದು ನಾನು ಅವುಗಳ ಹೆಗಲಿಗೆ ಕಬ್ಬಿಣದ ನೊಗವನ್ನು ಹೇರಿದ್ದೇನೆ, ಅವು ಅವನನ್ನು ಪೂಜಿಸುವವು; ಇದಲ್ಲದೆ ಭೂಜಂತುಗಳನ್ನೂ ಅವನಿಗೆ ಕೊಟ್ಟಿದ್ದೇನೆ’ ಎಂದು ಹೇಳು” ಎಂಬುದೇ.

15 ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ, “ಹನನ್ಯನೇ, ಕೇಳು, ಯೆಹೋವನು ನಿನ್ನನ್ನು ಕಳುಹಿಸಲಿಲ್ಲ; ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತೀ.

16 ಆದಕಾರಣ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ನಿನ್ನನ್ನು ಭೂಮಿಯ ಮೇಲಿಂದ ತೊಲಗಿಸುವೆನು; ನೀನು ಯೆಹೋವನಾದ ನನ್ನ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಇದೇ ವರ್ಷ ಸಾಯುವಿ” ಎಂದು ಹೇಳಿದನು.

17 ಅದರಂತೆ ಪ್ರವಾದಿಯಾದ ಹನನ್ಯನು ಅದೇ ವರ್ಷ ಏಳನೆಯ ತಿಂಗಳಲ್ಲಿ ಸತ್ತನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು