Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪಷ್ಹೂರನು ಯೆರೆಮೀಯನನ್ನು ಕೋಳಕ್ಕೆ ಹಾಕಿಸಿದ್ದು

1 ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು.

2 ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ, ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲಲ್ಲಿದ್ದ ಕೋಳಕ್ಕೆ ಹಾಕಿಸಿದನು.

3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು, “ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ಮಿಸ್ಸಾಬೀಬ್ ಎಂದು ಹೇಳಿದ್ದಾನೆ.

4 ಏಕೆಂದರೆ, ಇಗೋ, ನಾನು ನಿನ್ನನ್ನು ನಿನಗೂ ಮತ್ತು ನಿನ್ನ ಎಲ್ಲಾ ಸ್ನೇಹಿತರಿಗೂ ದಿಗಿಲಿಗಿ ಆಸ್ಪದನನ್ನಾಗಿ ಮಾಡುವೆನು; ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು, ನೀನು ಅದನ್ನು ಕಣ್ಣಾರೆ ಕಾಣುವಿ. ನಾನು ಯೆಹೂದ್ಯರನ್ನೆಲ್ಲಾ ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದು ಕತ್ತಿಯಿಂದ ಕಡಿಯುವನು.

5 ಈ ಪಟ್ಟಣದ ಎಲ್ಲಾ ಆಸ್ತಿಯನ್ನೂ, ಆದಾಯವನ್ನೂ ಮತ್ತು ಸಂಪತ್ತನ್ನೂ ಯೆಹೂದದ ಅರಸರ ಸಕಲ ನಿಧಿ, ನಿಕ್ಷೇಪಗಳನ್ನೂ ಅವರ ಶತ್ರುಗಳ ಕೈವಶಮಾಡುವೆನು; ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.

6 ಪಷ್ಹೂರನೇ, ನೀನೋ ನಿನ್ನ ಮನೆಯವರೆಲ್ಲರೊಡನೆ ಸೆರೆಗೆ ಹೋಗುವಿ. ನೀನೂ ಮತ್ತು ನಿನ್ನ ಮಿಥ್ಯಾ ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಸ್ನೇಹಿತರೂ ಬಾಬಿಲೋನಿಗೆ ಸೇರಿ ಅಲ್ಲೇ ಸತ್ತು ಮಣ್ಣಾಗುವಿರಿ” ಎಂದು ನುಡಿದಿದ್ದಾನೆ.


ಪ್ರವಾದಿಯ ಪ್ರಲಾಪ

7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.

8 ನಾನು ಮಾತನಾಡುವುದೆಲ್ಲಾ ಅರಚಾಟವೇ. “ಬಲಾತ್ಕಾರ, ಕೊಳ್ಳೆ” ಎಂದೇ ಕೂಗಿಕೊಳ್ಳುತ್ತೇನೆ. ನಾನು ಸಾರುವ ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸ್ಯಕ್ಕೂ ಗುರಿಮಾಡಿದೆ.

9 “ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ, ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ, ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ.

10 “ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು” ಎಂದು ಬಹು ಜನರು ಗುಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತ ಸ್ನೇಹಿತರೆಲ್ಲರೂ “ಇವನು ಎಡವಿ ಬೀಳಲಿ” ಎಂದು ನನ್ನನ್ನು ಹೊಂಚಿನೋಡುತ್ತಾ, “ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ.

11 ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ. ಆದುದರಿಂದ ನನ್ನ ಹಿಂಸಕರು ಗೆಲ್ಲದೆ ಮುಗ್ಗರಿಸುವರು. ತಮ್ಮ ಇಷ್ಟಾರ್ಥವು ನೆರವೇರದ ಕಾರಣ ದೊಡ್ಡ ನಾಚಿಕೆಗೆ ಈಡಾಗುವರು, ಎಂದಿಗೂ ಮರೆಯದ ಶಾಶ್ವತ ಅವಮಾನಕ್ಕೆ ಒಳಗಾಗುವರು.

12 ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರೀಕ್ಷಿಸಿ ಶಿಷ್ಟರನ್ನು ಶೋಧಿಸುವ ಸೇನಾಧೀಶ್ವರನಾದ ಯೆಹೋವನೇ, ನೀನು ನನ್ನ ಹಿಂಸಕರಿಗೆ ಕೊಡುವ ಪ್ರತಿಫಲವನ್ನು ನನ್ನ ಕಣ್ಣು ನೋಡಲಿ; ನಿನಗೇ ನನ್ನ ವ್ಯಾಜ್ಯವನ್ನು ಅರಿಕೆಮಾಡಿದ್ದೇನಷ್ಟೆ.

13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ; ಆತನು ಕೆಡುಕರ ಕೈಯಿಂದ ದೀನನ ಪ್ರಾಣವನ್ನು ರಕ್ಷಿಸಿದ್ದಾನೆ.

14 ನಾನು ಹುಟ್ಟಿದ ದಿನ ಶಾಪಗ್ರಸ್ತವಾಗಲಿ, ತಾಯಿಯು ನನ್ನನ್ನು ಹೆತ್ತ ದಿನವು ಅಶುಭವೆನ್ನಿಸಿಕೊಳ್ಳಲಿ!

15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ ಅವನಿಗೆ ಕೇವಲ ಆನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ!

16 ಯೆಹೋವನು ಕನಿಕರಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ. ಮುಂಜಾನೆಯಲ್ಲಿ ಅರಚಾಟವು, ಮಧ್ಯಾಹ್ನದಲ್ಲಿ ಕೂಗಾಟವು ಅವನ ಕಿವಿಗೆ ಬೀಳಲಿ!

17 ಅವನು ನನ್ನನ್ನು ಗರ್ಭದಲ್ಲೇ ಕೊಲ್ಲಲಿಲ್ಲವಲ್ಲಾ; ಹೀಗೆ ಮಾಡಿದ್ದರೆ ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು, ಆಕೆಯ ಗರ್ಭವು ಯಾವಾಗಲೂ ಬಸುರಾಗಿಯೇ ಇರುತ್ತಿತ್ತು.

18 ನಾನು ಶ್ರಮದುಃಖಗಳನ್ನು ನೋಡುವುದಕ್ಕೂ, ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವುದಕ್ಕೂ ಗರ್ಭದಿಂದ ಏಕೆ ಹೊರಟು ಬಂದೆನು?

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು