ಯೆರೆಮೀಯ 14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೂದಕ್ಕೆ ಸಂಭವಿಸುವ ಕ್ಷಾಮ 1 ಬರಗಾಲದ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ನುಡಿ: 2 ಯೆಹೂದವು ದುಃಖಿಸುತ್ತದೆ, ಅಲ್ಲಿಯ ಜನರು ಕಂಗೆಟ್ಟು ಕರ್ರಗಾಗಿ ನೆಲದ ಮೇಲೆ ಬಿದ್ದಿದ್ದಾರೆ, ಯೆರೂಸಲೇಮಿನವರ ಗೋಳಾಟವು ಕೇಳಿಸುತ್ತದೆ. 3 ಅವರಲ್ಲಿನ ಶ್ರೀಮಂತರು ತಮ್ಮ ಕೈಕೆಳಗಿನವರನ್ನು ನೀರು ತರಲು ಕಳುಹಿಸುತ್ತಾರೆ. ಅವರು ಕೊಳಗಳಿಗೆ ಹೋದಾಗ ನೀರು ಕಾಣುವುದಿಲ್ಲ, ಬರೀ ಪಾತ್ರೆಗಳನ್ನು ತೆಗೆದುಕೊಂಡು ಹಿಂದಕ್ಕೆ ಬರುತ್ತಾರೆ. ಆಶೆಗೆಟ್ಟು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ. 4 ದೇಶದಲ್ಲಿ ಮಳೆಯಿಲ್ಲದೆ ಭೂಮಿಯು ಬಿರುಕುಬಿಟ್ಟಿರುವುದರಿಂದ ರೈತರು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ. 5 ಇದಲ್ಲದೆ ಹೆಣ್ಣು ಜಿಂಕೆಯು ಕಾಡಿನಲ್ಲಿ ಈದು, ಹುಲ್ಲಿಲ್ಲದ ಕಾರಣ ತನ್ನ ಮರಿಯನ್ನು ಬಿಟ್ಟುಬಿಡುತ್ತದೆ. 6 ಕಾಡುಕತ್ತೆಗಳು ಬೋಳುಗುಡ್ಡಗಳಲ್ಲಿ ನಿಂತುಕೊಂಡು ನರಿಗಳಂತೆ ನಿಟ್ಟುಸಿರುಬಿಟ್ಟು ಗಾಳಿಯನ್ನು ಹಾರೈಸುತ್ತವೆ, ಸೊಪ್ಪುಸದೆಯಿಲ್ಲದೆ ಕಂಗೆಡುತ್ತವೆ. ಪ್ರವಾದಿಯು ಸ್ವಜನರಿಗಾಗಿ ಮಾಡಿದ ಪ್ರಾರ್ಥನೆ 7 ಯೆಹೋವನೇ, ನಮ್ಮ ಅಪರಾಧಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಟ್ಟರೂ, ನಿನ್ನ ಹೆಸರಿನ ನಿಮಿತ್ತ ಕಾರ್ಯವನ್ನು ಸಾಧಿಸು. ನಮ್ಮ ದ್ರೋಹಗಳು ಬಹಳ, ನಿನ್ನ ವಿರುದ್ಧವಾಗಿ ಪಾಪವನ್ನು ಮಾಡಿದ್ದೇವೆ. 8 ಇಸ್ರಾಯೇಲರ ನಿರೀಕ್ಷೆಯೇ, ಇಕ್ಕಟ್ಟಿನಲ್ಲಿ ಅವರಿಗೆ ರಕ್ಷಕನೇ, ಏಕೆ ಸ್ವದೇಶದಲ್ಲಿ ಪರದೇಶಿಯಂತೆಯೂ, ಇಳಿದುಕೊಳ್ಳುವುದಕ್ಕೆ ಗುಡಾರಹಾಕಿಕೊಳ್ಳುವ ಪ್ರಯಾಣಿಕನ ಹಾಗೂ ಇದ್ದೀ? 9 ಏಕೆ ಸ್ತಬ್ಧನಂತೆಯೂ, ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ? ಆದರೂ ಯೆಹೋವನೇ, ನೀನು ನಮ್ಮ ಮಧ್ಯದಲ್ಲಿರುತ್ತಿ. ನಾವು ನಿನ್ನ ಹೆಸರಿನವರು, ನಮ್ಮನ್ನು ಕೈಬಿಡಬೇಡ. ಯೆಹೋವನು ತನ್ನ ಜನರನ್ನೂ ಮತ್ತು ಅವರನ್ನು ವಂಚಿಸಿದ ಪ್ರವಾದಿಗಳನ್ನೂ ಗದರಿಸಿದ್ದು 10 ಯೆಹೋವನು ಈ ಜನರನ್ನು ಕುರಿತು, “ಇವರು ಪ್ರಯಾಣಿಕನ ಹಾಗೆ ಅಲೆಯುವುದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ. ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ್ದಾನೆ. 11 ಮತ್ತು ಯೆಹೋವನು ನನಗೆ, “ಈ ಜನರ ಹಿತವನ್ನು ಬಯಸಿ ಇವರಿಗೋಸ್ಕರ ಪ್ರಾರ್ಥನೆ ಮಾಡಬೇಡ. 12 ಇವರು ಉಪವಾಸಮಾಡುವಾಗ ಇವರ ಮೊರೆಯನ್ನು ಕೇಳೆನು. ಹೋಮನೈವೇದ್ಯಗಳನ್ನು ಅರ್ಪಿಸಲು ಸ್ವೀಕರಿಸೆನು. ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಇವರನ್ನು ನಿರ್ಮೂಲಮಾಡುವೆನು” ಎಂದು ಹೇಳಿದನು. 13 ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ, ‘ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ತಾನು ಪ್ರಮಾಣ ಮಾಡಿದಂತೆ ಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ’” ಎಂಬುದಾಗಿ ಹೇಳಿದೆನು. 14 ಆಗ ಯೆಹೋವನು ನನಗೆ ಹೀಗೆ ನುಡಿದನು, “ಈ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಅಪ್ಪಣೆಕೊಡಲಿಲ್ಲ, ಏನೂ ಹೇಳಲಿಲ್ಲ. ಅವರು ಸುಳ್ಳಾದ ದರ್ಶನವನ್ನೂ, ಕಣಿಯನ್ನೂ, ಮಾಯಾತಂತ್ರವನ್ನೂ, ಸ್ವಕಲ್ಪಿತ ಮೋಸವನ್ನೂ ನಿಮಗೆ ಪ್ರಕಟಿಸುತ್ತಾರೆ. 15 ಆದಕಾರಣ ನನ್ನ ಅಪ್ಪಣೆಯಿಲ್ಲದೆ ನನ್ನ ಹೆಸರಿನಿಂದ ಪ್ರವಾದಿಸುತ್ತಾ ಖಡ್ಗವೂ, ಕ್ಷಾಮವೂ ಈ ದೇಶಕ್ಕೆ ಬಾರವು ಎಂದು ಬೋಧಿಸುವ ಪ್ರವಾದಿಗಳ ವಿಷಯದಲ್ಲಿ ಯೆಹೋವನಾದ ನಾನು, ‘ಖಡ್ಗದಿಂದಲೂ, ಕ್ಷಾಮದಿಂದಲೂ ಈ ಪ್ರವಾದಿಗಳು ನಿರ್ಮೂಲರಾಗುವರು’” ಎಂದು ಹೇಳುತ್ತೇನೆ. 16 ಮತ್ತು ಇವರ ಪ್ರವಾದನೆಯನ್ನು ಕೇಳುವ ಜನರು ಕ್ಷಾಮ ಮತ್ತು ಖಡ್ಗಗಳ ದೆಸೆಯಿಂದ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಅವರ ಹೆಂಡತಿ ಮತ್ತು ಮಕ್ಕಳನ್ನೂ ಹೂಣಿಡುವುದಕ್ಕೆ ಯಾರೂ ಇರುವುದಿಲ್ಲ; ನಾನು ಅವರ ದುಷ್ಟತನವನ್ನೇ ಅವರ ಮೇಲೆ ಹೊಯ್ದುಬಿಡುವೆನು. 17 ನೀನು ಅವರಿಗೆ, “ನನ್ನ ಕಣ್ಣೀರು ರಾತ್ರಿ ಹಗಲು ನಿರಂತರ ಸುರಿಯಲಿ; ಏಕೆಂದರೆ ನನ್ನ ಜನವೆಂಬ ಯುವತಿಗೆ ದೊಡ್ಡ ಗಾಯವಾಯಿತು, ಹೌದು ಗಡುಸಾದ ಪೆಟ್ಟು ಬಿತ್ತು. 18 ನಾನು ಊರ ಹೊರಗೆ ಹೋದರೆ ಇಗೋ, ಖಡ್ಗದಿಂದ ಹತರಾದವರು, ಊರೊಳಗೆ ಬಂದರೆ ಇಗೋ, ಕ್ಷಾಮದಿಂದ ಕೊರಗುವವರು! ಪ್ರವಾದಿಗಳೂ ಯಾಜಕರೂ ತಮಗೆ ಗೊತ್ತಿಲ್ಲದ ದೇಶಕ್ಕೆ ಗಡೀಪಾರಾಗಿದ್ದಾರೆ ಎಂಬ ಮಾತುಗಳನ್ನು ಹೇಳು” ಎಂದನು. ಪ್ರವಾದಿಯು ಸ್ವಜನರಿಗಾಗಿ ಮಾಡಿದ ಇನ್ನೊಂದು ಪ್ರಾರ್ಥನೆ 19 ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ? ಚೀಯೋನನ್ನು ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದಿಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟುಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮ ಕಾಲವನ್ನೂ ಎದುರುನೋಡಿದೆವು, ಹಾ, ಅಂಜಿಕೆಯೇ! 20 ಯೆಹೋವನೇ, ನಮ್ಮ ದುಷ್ಟತನವನ್ನೂ ಒಪ್ಪಿಕೊಳ್ಳುತ್ತೇವೆ, ನಮ್ಮ ಪೂರ್ವಿಕರ ದುರಾಚಾರವನ್ನೂ ತಿಳಿದುಕೊಂಡಿದ್ದೇವೆ; ನಾವು ನಿನಗೇ ಪಾಪಮಾಡಿದ್ದೇವೆ. 21 ನಿನ್ನ ನಾಮದ ಮೇಲೆ ದೃಷ್ಟಿಯಿಡು, ನಿನ್ನ ಮಹಿಮೆಯ ಸಿಂಹಾಸನವನ್ನು ಅಸಡ್ಡೆಮಾಡಬೇಡ. ಅವಮಾನಪಡಿಸಬೇಡ; ನೀನು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರು. 22 ಜನಾಂಗಗಳ ವ್ಯರ್ಥವಾದ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದಮಳೆಗಳನ್ನು ಕೊಟ್ಟೀತೇ? ನಮ್ಮ ದೇವರಾದ ಯೆಹೋವನೇ, ನೀನೇ ವೃಷ್ಟಿಪ್ರದನು; ನಾವು ನಿನ್ನನ್ನೇ ನಿರೀಕ್ಷಿಸುವೆವು. ನೀನು ಇವುಗಳನ್ನೆಲ್ಲಾ ನಡೆಸುವವನಾಗಿದ್ದೀಯಷ್ಟೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.