Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಒಡಂಬಡಿಕೆಯ ಉಲ್ಲಂಘನೆ

1 ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,

2 “ಈ ನಿಬಂಧನವಚನಗಳನ್ನು ಕೇಳಿ ಯೆಹೂದ್ಯರಿಗೂ ಹಾಗೂ ಯೆರೂಸಲೇಮಿನ ನಿವಾಸಿಗಳಿಗೂ,

3 ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.

4 ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನಿಮ್ಮ ಪೂರ್ವಿಕರನ್ನು ಬರಮಾಡಿದಾಗ ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ಈ ವಿಧಿಗಳನ್ನೆಲ್ಲಾ ಕೈಕೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ, ನಾನು ನಿಮ್ಮ ದೇವರಾಗಿರುವೆನು.

5 ನಾನು ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದೆನಷ್ಟೆ. ಆ ನನ್ನ ಮಾತು ಈಗ ಕೈಗೂಡಿದೆ” ಎಂದು ಸಾರಬೇಕು ಎಂದನು. ಆಗ ನಾನು, “ಅಪ್ಪಣೆಯಂತಾಗಲಿ, ಯೆಹೋವನೇ” ಎಂದು ಉತ್ತರಕೊಟ್ಟೆನು.

6 ಯೆಹೋವನು ನನಗೆ, “ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಈ ಮಾತುಗಳನ್ನೆಲ್ಲಾ ಸಾರು, ‘ಈ ನಿಬಂಧನ ವಾಕ್ಯಗಳನ್ನೆಲ್ಲಾ ಕೇಳಿ ಕೈಕೊಳ್ಳಿರಿ.

7 ನಿಮ್ಮ ಪೂರ್ವಿಕರನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ, ನನ್ನ ಮಾತನ್ನು ಕೇಳಿರಿ ಎಂದು ತಡ ಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದೆನಷ್ಟೆ.

8 ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನೂ ತನ್ನ ತನ್ನ ದುಷ್ಟಹೃದಯದ ಹಟಕ್ಕೆ ತಕ್ಕ ಹಾಗೆ ನಡೆದನು; ಆದಕಾರಣ ಕೈಕೊಳ್ಳಬೇಕೆಂದು ನಾನು ಆಜ್ಞಾಪಿಸಿದರೂ ಅವರು ಕೈಗೊಳ್ಳದ ಈ ನಿಬಂಧನೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡಿದೆನು’” ಎಂದು ಹೇಳಿದನು.


ಯೆಹೂದದ ದ್ರೋಹದ ನಿಮಿತ್ತ ಸಂಭವಿಸುವ ಕೇಡು

9 ಯೆಹೋವನು ನನಗೆ, “ಯೆಹೂದ್ಯರಲ್ಲಿಯೂ ಮತ್ತು ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡು ಬಂದಿದೆ.

10 ನನ್ನ ಮಾತುಗಳನ್ನು ಕೇಳದಿದ್ದ ತಮ್ಮ ಪೂರ್ವಿಕರ ದುಷ್ಕೃತ್ಯಗಳ ಕಡೆಗೆ ತಿರುಗಿಕೊಂಡು, ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸಿದ್ದಾರೆ. ಇಸ್ರಾಯೇಲ್ ವಂಶದವರೂ ಮತ್ತು ಯೆಹೂದ ವಂಶದವರೂ ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ.

11 ಆದಕಾರಣ ಯೆಹೋವನೆಂಬ ನಾನು ಹೀಗೆನ್ನುತ್ತೇನೆ, ‘ಇಗೋ, ಅವರು ತಪ್ಪಿಸಿಕೊಳ್ಳಲಾರದ ಕೇಡನ್ನು ಅವರ ಮೇಲೆ ಬರಮಾಡುವೆನು; ನನಗೆ ಮೊರೆಯಿಟ್ಟರೂ ಕೇಳೆನು.

12 ಆಗ ಯೆಹೂದದ ಪಟ್ಟಣಗಳವರೂ ಹಾಗು ಯೆರೂಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಹೋಮಮಾಡಿದರೋ ಅವುಗಳನ್ನು ಮೊರೆಹೊಕ್ಕಿ ಕೂಗಿಕೊಳ್ಳುವರು, ಆದರೆ ಅಂಥ ಕೇಡಿನ ಕಾಲದಲ್ಲಿ ಅವುಗಳಿಂದ ಅವರಿಗೆ ಎಷ್ಟು ಮಾತ್ರವೂ ರಕ್ಷಣೆಯಾಗುವುದಿಲ್ಲ.’

13 ಯೆಹೂದದವರೇ, ನಿಮ್ಮ ಪಟ್ಟಣಗಳೆಷ್ಟೋ ನಿಮ್ಮ ದೇವರುಗಳೂ ಅಷ್ಟು. ಯೆರೂಸಲೇಮಿನ ಬೀದಿಗಳೆಷ್ಟೋ ತುಚ್ಛ ದೇವತೆಯಾದ ಬಾಳನಿಗೆ ಹೋಮ ಮಾಡುವುದಕ್ಕಾಗಿ ನೀವು ಮಾಡಿಕೊಂಡಿರುವ ಬಲಿಪೀಠಗಳೂ ಅಷ್ಟು.

14 ಆದಕಾರಣ ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂ ಬೇಡ. ಅವರು ತಮ್ಮ ಕೇಡಿನ ನಿಮಿತ್ತ ನನಗೆ ಮೊರೆಯಿಡುವಾಗ ನಾನು ಕೇಳುವುದಿಲ್ಲ” ಎಂದು ಹೇಳಿದನು.

15 ನನ್ನ ಆಪ್ತಜನವು ನನ್ನ ಮನೆಯಲ್ಲಿ ಅಸಹ್ಯ ಕಾರ್ಯವನ್ನು ಮಾಡಿದ್ದೇಕೆ? ವ್ರತಗಳೂ, ಮೀಸಲಿನ ಮಾಂಸವೂ ನಿನ್ನ ದುಷ್ಟತನವನ್ನು ಪರಿಹರಿಸುವುದೋ? ಇಂಥವುಗಳ ಮೂಲಕ ತಪ್ಪಿಸಿಕೊಂಡೆಯಾ?

16 ಯೆಹೋವನು ನಿನಗೆ ಸುಂದರವಾದ ಫಲದಿಂದ ಕೂಡಿದ ಹಸಿರಾದ ಒಲೀವ್ ಮರವೆಂದು ಹೆಸರಿಟ್ಟಿದ್ದನು. ಆದರೆ ಅವನು ಆ ಮರಕ್ಕೆ ಬೆಂಕಿ ಹಚ್ಚಿ ಬಲು ಧಗಧಗಿಸುವಂತೆ ಮಾಡಿದ್ದಾನೆ; ಅದರ ರೆಂಬೆಗಳು ಮುರಿದುಹೋಗಿವೆ.

17 ಇಸ್ರಾಯೇಲ್ ವಂಶವೂ ಮತ್ತು ಯೆಹೂದ ವಂಶವೂ ಬಾಳನಿಗೆ ಹೋಮವನ್ನರ್ಪಿಸಿ, ನನ್ನನ್ನು ಕೆಣಕಿ ತಮಗೆ ಕೆಡುಕನ್ನು ಮಾಡಿಕೊಂಡಿದ್ದರಿಂದ ನಿನ್ನನ್ನು ನೆಟ್ಟ ಸೇನಾಧೀಶ್ವರನಾದ ಯೆಹೋವನು, “ನಿನಗೆ ಕೆಡುಕಾಗಲಿ” ಎಂದು ಶಪಿಸಿದ್ದಾನೆ.


ಯೆರೆಮೀಯನಿಗೆ ವಿರುದ್ಧವಾದ ಒಳಸಂಚು

18 ಯೆಹೋವನು ತಿಳಿಸಿದ್ದರಿಂದ ಅವರ ಕುತಂತ್ರವು ನನಗೆ ಗೊತ್ತಾಯಿತು; ಆಗಲೇ ಅವರ ಕೃತ್ಯಗಳನ್ನು ನನಗೆ ತೋರಿಸಿದಿ.

19 ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ.

20 ಹೃದಯವನ್ನೂ, ಅಂತರಿಂದ್ರಿಯವನ್ನೂ ಪರೀಕ್ಷಿಸಿ, ನ್ಯಾಯವಾಗಿ ತೀರ್ಪುಮಾಡುವ ಸೇನಾಧೀಶ್ವರನಾದ ಯೆಹೋವನೇ, ನೀನು ಅವರಿಗೆ ಕೊಡುವ ಪ್ರತಿಫಲವನ್ನು ನಾನು ಕಾಣುವೆನು; ನನ್ನ ವ್ಯಾಜ್ಯವನ್ನು ನಿನಗೇ ಅರಿಕೆಮಾಡಿದ್ದೇನಷ್ಟೆ ಎಂದು ಹೇಳಿದೆನು.

21 ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನಗೆ, “ನಮ್ಮ ಕೈಯಿಂದ ನೀನು ಸಾಯಬಾರದೆಂದರೆ ಯೆಹೋವನ ಹೆಸರೆತ್ತಿ ಪ್ರವಾದಿಸಬೇಡ ಎಂದು ನಿನ್ನ ಪ್ರಾಣಕ್ಕೆ ಹೊಂಚುಹಾಕುತ್ತಿರುವ ಅನಾತೋತಿನವರ ವಿಷಯದಲ್ಲಿ ನನ್ನ ತೀರ್ಮಾನವು ಇದೇ.

22 ಇಗೋ, ಅವರನ್ನು ದಂಡಿಸುವೆನು, ಯೌವನಸ್ಥರು ಖಡ್ಗದಿಂದ ನಾಶವಾಗುವರು. ಅವರ ಗಂಡು ಮತ್ತು ಹೆಣ್ಣುಮಕ್ಕಳು ಕ್ಷಾಮದಿಂದ ಸಾಯುವರು.

23 ದಂಡನೆಯ ವರ್ಷದಲ್ಲಿ ಅನಾತೋತಿನವರಿಗೆ ಕೇಡನ್ನು ಬರಮಾಡುವೆನು, ಅವರಲ್ಲಿ ಯಾರೂ ಉಳಿಯರು” ಎಂದು ಹೇಳಿದ್ದಾನೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು