ಯಾಜಕಕಾಂಡ 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅಶುದ್ಧತೆಗೆ ಕಾರಣವಾಗುವ ಸಂಗತಿಗಳು 1 “‘ನ್ಯಾಯಾಧಿಕಾರಿಯು ತಿಳಿಸಬೇಕೆಂದು ಆಣೆ ಇಟ್ಟರೂ, ಯಾವನಾದರೂ ತಾನು ಕಂಡು ಕೇಳಿದ್ದನ್ನು ತಿಳಿಸದೆಹೋದರೆ ಅವನು ಪಾಪಕ್ಕೆ ಗುರಿಯಾಗುವನು. 2 ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು ಮತ್ತು ಜಂತು ಇವುಗಳ ಹೆಣವಾಗಲಿ ಅಥವಾ ಬೇರೆ ಯಾವ ಅಶುದ್ಧವಸ್ತುವಾಗಲಿ ತಗಲಿದರೆ, ದೇವರು ಅದನ್ನು ಅಶುದ್ಧ ಎಂದು ಪರಿಗಣಿಸುವುದರಿಂದ ಅವನಿಗೆ ತಿಳಿಯದೆ ಹೋದರೂ ಅವನು ಅಶುದ್ಧನೂ ಮತ್ತು ದೋಷಿಯೂ ಆಗಿರುವನು. 3 ಮನುಷ್ಯದೇಹದಿಂದ ಉಂಟಾದ ಯಾವುದಾದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ಅದು ಅವನಿಗೆ ತಿಳಿದುಬಂದಾಗ ಅವನು ದೋಷಿಯಾಗುವನು. 4 ಯಾವನಾದರೂ ಆಲೋಚಿಸದೆ ಮೇಲಿಗಾಗಲಿ ಅಥವಾ ಕೇಡಿಗಾಗಲಿ ಯಾವುದಾದರೂ ಆಣೆಯಿಟ್ಟುಕೊಂಡರೆ, ಅದು ಅವನಿಗೆ ತಿಳಿಯದೆ ಹೋದರೂ ತಿಳಿದುಬಂದಾಗ ಅವನು ಇದರಿಂದಲೂ ದೋಷಿಯಾಗುವನು. 5 ಅವನು ಈ ವಿಷಯಗಳಲ್ಲಿ ಯಾವುದಾದರೂ ಒಂದರಲ್ಲಿ ದೋಷಿಯಾದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು. 6 ಅವನು ದೋಷದ ಪ್ರಾಯಶ್ಚಿತ್ತಕ್ಕಾಗಿ ಹೆಣ್ಣು ಕುರಿಯನ್ನಾಗಲಿ ಅಥವಾ ಹೆಣ್ಣು ಮೇಕೆಯನ್ನಾಗಲಿ ಯೆಹೋವನಿಗೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು. 7 “‘ಕುರಿಯನ್ನು ಕೊಡುವುದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು, ಒಂದನ್ನು ದೋಷಪರಿಹಾರಕ ಯಜ್ಞವಾಗಿ ಮತ್ತೊಂದನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 8 ಅವನು ಅವುಗಳನ್ನು ಯಾಜಕನ ಬಳಿಗೆ ತಂದಾಗ ಯಾಜಕನು ಮೊದಲು ದೋಷಪರಿಹಾರಾರ್ಥವಾದದ್ದನ್ನು ಸಮರ್ಪಿಸಬೇಕು. ಅವನು ಅದರ ಕುತ್ತಿಗೆ ಮುರಿಯಬೇಕು; ಆದರೆ ತಲೆಯನ್ನು ಪೂರ್ಣವಾಗಿ ತೆಗೆದುಬಿಡಬಾರದು. 9 ಆಗ ಅವನು ದೋಷಪರಿಹಾರಾರ್ಥವಾದ ಆ ಪಕ್ಷಿಯ ರಕ್ತದಲ್ಲಿ ಸ್ವಲ್ಪವನ್ನು ಯಜ್ಞವೇದಿಯ ಪಕ್ಕಕ್ಕೆ ಚಿಮುಕಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿಯಬೇಕು. ಅದು ದೋಷಪರಿಹಾರಕ ಯಜ್ಞ. 10 ಅವನು ಎರಡನೆಯ ಪಕ್ಷಿಯನ್ನು ನಿಯಮಗಳಿಗೆ ಅನುಸಾರವಾಗಿ ಅದೇ ರೀತಿಯಲ್ಲಿ ಸರ್ವಾಂಗಹೋಮ ಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು. 11 “‘ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ಕೊಡುವುದಕ್ಕೂ ಗತಿಯಿಲ್ಲದೆ ಹೋದರೆ, ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾಗಿ ಇರುವುದರಿಂದ ಅದರ ಮೇಲೆ ಎಣ್ಣೆಯನ್ನು ಹೊಯ್ಯಬಾರದು ಅಥವಾ ಧೂಪವನ್ನು ಇಡಬಾರದು. 12 ಅವನು ಯಾಜಕನ ಬಳಿಗೆ ಅದನ್ನು ತಂದನಂತರ ಅದು ದೈವಾರ್ಪಿತವೆಂದು ಸೂಚಿಸುವುದಕ್ಕಾಗಿ ಯಾಜಕನು ಅದರಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳ ಮೇಲೆ ಯಜ್ಞವೇದಿಯಲ್ಲಿ ಹೋಮಮಾಡಬೇಕು; ಅದು ದೋಷಪರಿಹಾರಕ ಯಜ್ಞ. 13 ಮೇಲೆ ಕಂಡ ವಿಷಯಗಳಲ್ಲಿ ಯಾವ ವಿಧವಾಗಿ ಅವನು ದೋಷಿಯಾದರೂ, ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರವನ್ನು ಮಾಡಿದನಂತರ ಅವನಿಗೆ ಕ್ಷಮಾಪಣೆಯಾಗುವುದು. ಧಾನ್ಯನೈವೇದ್ಯ ದ್ರವ್ಯದಲ್ಲಿ ಉಳಿದದ್ದು ಹೇಗೆ ಯಾಜಕನಿಗೆ ಸಲ್ಲುತ್ತದೋ ಇದರಲ್ಲಿಯೂ ಉಳಿದದ್ದು ಯಾಜಕನಿಗೆ ಸಲ್ಲಬೇಕು.’” ಪ್ರಾಯಶ್ಚಿತ್ತ ಯಜ್ಞ 14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 15 “ಯಾವನಾದರೂ ಯೆಹೋವನಿಗೆ ಸಲ್ಲಿಸಬೇಕಾದ ದೇವರ ವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ ಅವನು ಆ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ಪೂರ್ಣಾಂಗವಾದ ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಯೆಹೋವನಿಗೆ ಸಮರ್ಪಿಸಬೇಕು ಅಥವಾ ದೇವರ ಸೇವೆಗೆ ನೇಮಕವಾದ ಎರಡು ಬೆಳ್ಳಿ ನಾಣ್ಯ ಅಥವಾ ಹೆಚ್ಚು ಬೆಲೆ ಬಾಳುವ ಟಗರನ್ನು ಹಿಂಡಿನಿಂದ ತಂದು ಅರ್ಪಿಸಬೇಕು. 16 ಅವನು ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ಪವಿತ್ರ ವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು. 17 “ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಕ್ಕೆ ಒಳಗಾದರೆ, ಅದು ಅವನಿಗೆ ತಿಳಿಯದೆ ಹೋದರೂ ಅವನು ಅದರಿಂದ ಅಪರಾಧಿಯಾಗಿ ತನ್ನ ಪಾಪಫಲವನ್ನು ಅನುಭವಿಸಬೇಕು. 18 ಅವನು ಪ್ರಾಯಶ್ಚಿತ್ತಕ್ಕಾಗಿ ಹಿಂಡಿನಿಂದ ಯೋಗ್ಯವಾಗಿ ತೋರುವ ಪೂರ್ಣಾಂಗವಾದ ಟಗರನ್ನು ಯಾಜಕನ ಬಳಿಗೆ ತೆಗೆದುಕೊಂಡು ಬರಬೇಕು. ಅವನು ತಿಳಿಯದೆ ಮಾಡಿದ ತಪ್ಪನ್ನು ಪರಿಹರಿಸುವುದಕ್ಕಾಗಿ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಬೇಕು; ಆಗ ಅವನಿಗೆ ಕ್ಷಮಾಪಣೆಯಾಗುವುದು. 19 ಅವನು ಅಪರಾಧಿಯಾದುದರಿಂದ ಯೆಹೋವನ ಸನ್ನಿಧಿಯಲ್ಲಿ ಈ ಪ್ರಾಯಶ್ಚಿತ್ತಯಜ್ಞವನ್ನು ಮಾಡಬೇಕು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.