Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವಸ್ಥಾನದ ದೀಪಸ್ತಂಭ

1 ಯೆಹೋವನು ಮೋಶೆಯ ಸಂಗಡ ಮಾತನಾಡಿ,

2 “ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವುದಕ್ಕಾಗಿ ಇಸ್ರಾಯೇಲರು ಎಣ್ಣೆಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.

3 ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಪೆಟ್ಟಿಗೆಯ ಮುಂದಣ ತೆರೆಯ ಹೊರಗೆ, ಆ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ಜಾವದ ವರೆಗೂ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ.

4 ಅವನು ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕಬಂಗಾರದ ದೀಪಸ್ತಂಭದ ಮೇಲೆ ಸರಿಯಾಗಿ ಇಟ್ಟು ನಿರ್ವಹಿಸಬೇಕು.


ಪವಿತ್ರವಾದ ರೊಟ್ಟಿ

5 “ಅದಲ್ಲದೆ ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು; ಪ್ರತಿಯೊಂದು ರೊಟ್ಟಿಯು ಆರಾರು ಸೇರಿನದಾಗಿರಬೇಕು.

6 ಅವುಗಳನ್ನು ಆರಾರು ರೊಟ್ಟಿಗಳ ಮೇರೆಗೆ ಎರಡು ರಾಶಿಗಳಾಗಿ, ಚೊಕ್ಕಬಂಗಾರದ ಮೇಜಿನ ಮೇಲೆ ಯೆಹೋವನ ಸನ್ನಿಧಿಯಲ್ಲಿ ಇಡಬೇಕು.

7 ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವುದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಬೇಕು.

8 ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು.

9 ಅವು ಆರೋನನಿಗೂ ಮತ್ತು ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಅವುಗಳನ್ನು ದೇವಸ್ಥಾನದ ಪ್ರಾಕಾರದಲ್ಲಿಯೇ ತಿನ್ನಬೇಕು. ಅವು ಯೆಹೋವನಿಗೆ ಸಮರ್ಪಿತವಾದ ಹೋಮದ್ರವ್ಯಗಳಿಗೆ ಸೇರಿದವುಗಳಾದುದರಿಂದ ಶಾಶ್ವತನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು” ಅಂದನು.


ದೇವದೂಷಕನಿಗೆ ಮರಣಶಿಕ್ಷೆ

10 ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಇಸ್ರಾಯೇಲರ ಪಾಳೆಯದಲ್ಲಿ, ಇಸ್ರಾಯೇಲನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬಂದನು.

11 ಅವನು ಯೆಹೋವನ ಹೆಸರನ್ನು ದೂಷಿಸಿ ಆತನನ್ನು ಶಪಿಸಿದ್ದರಿಂದ ಅವರು ಅವನನ್ನು ಮೋಶೆಯ ಬಳಿಗೆ ಹಿಡಿದು ಕರೆದುಕೊಂಡು ಬಂದರು. ಅವನ ತಾಯಿಯು ದಾನ್ ಕುಲದ ದಿಬ್ರೀಯ ಮಗಳಾದ ಶೆಲೋಮೀತ್ ಎಂಬುವವಳು.

12 ಅವನ ವಿಷಯವಾಗಿ ಯೆಹೋವನ ತೀರ್ಪನ್ನು ತಿಳುಕೊಳ್ಳುವ ತನಕ ಅವನನ್ನು ಕಾವಲಲ್ಲಿರಿಸಿದರು.

13 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

14 “ದೂಷಿಸಿದ ಆ ಮನುಷ್ಯನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.

15 ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.

16 ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

17 “‘ಮನುಷ್ಯನನ್ನು ಕೊಂದವನಿಗೆ ಮರಣ ಶಿಕ್ಷೆಯಾಗಬೇಕು.

18 ಪಶುವನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು, ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.

19 ಯಾವನಾದರೂ ಮತ್ತೊಬ್ಬನನ್ನು ಅಂಗಹೀನಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಿಸಬೇಕು.

20 ಅವಯವವನ್ನು ಮುರಿದವನಿಗೆ ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಸಬೇಕು. ಮತ್ತೊಬ್ಬನನ್ನು ಅಂಗಹೀನ ಮಾಡಿದವನಿಗೆ ಈ ಪ್ರಕಾರ ಪ್ರತಿಕಾರ ಮಾಡಬೇಕು.

21 ಪಶುವನ್ನು ಕೊಂದವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು.

22 ಅನ್ಯರಿಗಾಗಲಿ ಅಥವಾ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಯೆಹೋವನು’” ಎಂಬುದೇ.

23 ಮೋಶೆ ಈ ಮಾತುಗಳನ್ನು ಇಸ್ರಾಯೇಲರಿಗೆ ತಿಳಿಸಲಾಗಿ ಅವರು ದೂಷಿಸಿದವನಾದ ಆ ಮನುಷ್ಯನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದುಬಿಟ್ಟರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು