ಯಾಜಕಕಾಂಡ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಶುದ್ಧ ಮತ್ತು ಅಶುದ್ಧವಾದ ಪ್ರಾಣಿಗಳು 1 ಯೆಹೋವನು ಮೋಶೆ ಆರೋನರ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ, 2 “ನೀವು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ಭೂಮಿಯ ಮೇಲಿರುವ ಪ್ರಾಣಿಗಳಲ್ಲಿ ಇವುಗಳ ಮಾಂಸವನ್ನು ನೀವು ತಿನ್ನಬಹುದು, 3 ಅವು ಯಾವುವೆಂದರೆ ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು. 4 ಆದರೆ ಯಾವ ಪ್ರಾಣಿಯು ಮೆಲಕು ಹಾಕಿದರೂ ಗೊರಸು ಸೀಳಲಿರುವುದಿಲ್ಲವೋ ಮತ್ತು ಯಾವ ಪ್ರಾಣಿಯು ಗೊರಸು ಸೀಳಿದರೂ ಮೆಲಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆಯು ಮೆಲಕುಹಾಕುವಂಥದು ಸರಿ; ಆದರೂ ಅದಕ್ಕೆ ಸೀಳುಗೊರಸು ಇಲ್ಲವಾದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದೆಣಿಸಬೇಕು. 5 ಬೆಟ್ಟದ ಮೊಲವೂ ಮೆಲಕುಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದುದರಿಂದ ಅದು ನಿಮಗೆ ಅಶುದ್ಧ. 6 ಮೊಲವೂ ಮೆಲಕುಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದೂ ನಿಮಗೆ ಅಶುದ್ಧ. 7 ಹಂದಿಯ ಗೊರಸು ಸೀಳಿದೆ; ಆದರೂ ಅದು ಮೆಲಕು ಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. 8 ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು. ಶುದ್ಧ ಮತ್ತು ಅಶುದ್ಧವಾದ ಜಲಜಂತುಗಳು 9 “‘ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ ಸಮುದ್ರದಲ್ಲಿಯಾಗಲಿ, ನದಿಯಲ್ಲಿಯಾಗಲಿ, ಬೇರೆ ಜಲಾಶಯದಲ್ಲಿಯಾಗಲಿ ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು. 10 ಆದರೆ ಸಮುದ್ರದಲ್ಲಿದ್ದರೂ ಅಥವಾ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಮತ್ತು ಪರೆಪರೆಯಾದ ಮೈಯೂ ಇರುವುದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು. 11 ಅಂತಹವು ಸಂಪೂರ್ಣವಾಗಿ ನಿಷಿದ್ಧವಾಗಿರುವುದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಅಸಹ್ಯವಾಗಿರಬೇಕು. 12 ಜಲಜಂತುಗಳಲ್ಲಿ ಯಾವುದಕ್ಕೆ ರೆಕ್ಕೆಗಳೂ, ಪರೆಪರೆಯಾದ ಮೈ ಇಲ್ಲವೋ ಅವು ನಿಮಗೆ ಅಸಹ್ಯವಾಗಿರಬೇಕು. ಶುದ್ಧ ಮತ್ತು ಅಶುದ್ಧವಾದ ಪಕ್ಷಿಗಳು 13 “‘ನಿಮಗೆ ನಿಷಿದ್ಧವಾದ ಮತ್ತು ಅಸಹ್ಯವಾದ ಪಕ್ಷಿಗಳು ಯಾವುವೆಂದರೆ ಗರುಡ, ಬೆಟ್ಟದ ಹದ್ದು, 14 ಕ್ರೌಂಚ, ಹದ್ದು, 15 ಸಕಲವಿಧವಾದ ಗಿಡುಗ, 16 ಸಕಲವಿಧವಾದ ಕಾಗೆ, ಉಷ್ಟ್ರಪಕ್ಷಿ, ಉಲೂಕ, ಕಡಲಹಕ್ಕಿ, ಸಕಲವಿಧವಾದ ಡೇಗೆ, 17 ಗೂಬೆ, ಹೆಗ್ಗೂಬೆ, ನೀರುಕಾಗೆ, 18 ಬಿಳಿಗೂಬೆ, ಕರೇಟು, ಕಣಜ ಗೂಬೆ, ರಣಹದ್ದು, ಕಡಲ ಡೇಗೆ, 19 ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ, ಕಣ್ಣಕಪಡಿ. ಇವುಗಳ ಮಾಂಸವನ್ನು ತಿನ್ನಬಾರದು. ನಿಷಿದ್ಧವಾದ ಕ್ರಿಮಿಕೀಟಗಳು 20 “‘ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ನಿಷಿದ್ಧವಾಗಿರಬೇಕು. 21 ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವುದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು. 22 ಸಕಲವಿಧವಾದ ಮಿಡತೆಗಳನ್ನು, ಬೋಳುಮಿಡತೆಗಳನ್ನು, ಜಿಟ್ಟಿಮಿಡತೆಗಳನ್ನು ಮತ್ತು ಸಣ್ಣಮಿಡತೆ ಇವುಗಳನ್ನೆಲ್ಲಾ ತಿನ್ನಬಹುದು. 23 ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲವಿಧವಾದ ಕ್ರಿಮಿಕೀಟಗಳು ನಿಮಗೆ ನಿಷಿದ್ಧವಾಗಿವೆ. ಅಪವಿತ್ರತೆಯನ್ನು ಉಂಟುಮಾಡುವ ಪ್ರಾಣಿಗಳು 24 “‘ಅದಲ್ಲದೆ ಮುಂದೆ ಹೇಳಿರುವ ಪ್ರಾಣಿಗಳಿಂದ ನಿಮಗೆ ಅಪವಿತ್ರತೆ ಉಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. 25 ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಸಾಯಂಕಾಲದವರೆಗೂ ಅಶುದ್ಧನಾಗಿರುವನು. 26 ಅವು ಯಾವುವೆಂದರೆ, ಯಾವ ಪಶುವಿನ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲಕುಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಯಾರನ್ನು ಅವು ಸೋಂಕುವವೋ ಅವನು ಅಶುದ್ಧನಾಗುವನು. 27 ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವ ಎಲ್ಲವುಗಳು ನಿಮಗೆ ಅಶುದ್ಧವಾಗಿರುವವು; ಅವುಗಳ ಹೆಣವನ್ನು ಯಾರು ಮುಟ್ಟುವರೋ ಅವರು ಆ ದಿನದ ಸಾಯಂಕಾಲದ ವರೆಗೂ ಅಶುದ್ಧರಾಗಿರುವರು. 28 ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ. ಅಶುದ್ಧವಾದ ಜಂತುಗಳು 29 “‘ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ನಿಮಗೆ ಅಶುದ್ಧವಾದವುಗಳು ಯಾವುವೆಂದರೆ ಮುಂಗುಸಿ, ಇಲಿ, ಸಕಲವಿಧವಾದ ಉಡ, 30 ಹಾವರಾಣಿ, ಊಸುರುವಳ್ಳಿ, ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ. 31 ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವನ್ನು ಮುಟ್ಟುವವನು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. 32 ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತುವು ಅಶುದ್ಧವಾಗಿರುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ, ಚರ್ಮವಾಗಲಿ ಅಥವಾ ಗೋಣಿಯಾಗಲಿ ಅದು ಎಂಥದಾದರೂ, ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಆ ಸಾಯಂಕಾಲದ ವರೆಗೂ ಅಶುದ್ಧವಾಗಿರುವುದು; ತರುವಾಯ ಶುದ್ಧಿಯಾಗುವುದು. 33 ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವುದೆಲ್ಲಾ ಅಶುದ್ಧವಾಗಿರುವುದು ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು. 34 ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದರೆ ಅಶುದ್ಧವಾಗುವುದು. ಪಾನ ದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವುದು. 35 ಆ ಜಂತುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಆ ಸಾಮಾನು ಅಶುದ್ಧವಾಗುವುದು. ಒಲೆಗಳಲ್ಲಿ ಅದು ಒಂಟಿ ಒಲೆಯಾಗಿದ್ದರೂ ಅಥವಾ ಜೋಡಿ ಒಲೆಯಾಗಿದ್ದರೂ ಅದು ಅಶುದ್ಧವಾದುದರಿಂದ ಅದನ್ನು ಒಡೆದುಬಿಡಬೇಕು; ಅದು ಅಶುದ್ಧವೇ. 36 ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು. 37 ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವುದಿಲ್ಲ. 38 ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ. 39 “‘ಆಹಾರಕ್ಕೆ ಯೋಗ್ಯವಾಗಿರುವ ಪಶುವು ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. 40 ಆ ಹೆಣದಲ್ಲಿ ಸ್ವಲ್ಪವಾಗಿ ತಿಂದರೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ತಿನ್ನಬಾರದ ಕ್ರಿಮಿಕೀಟಗಳು 41 “‘ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೆಲ್ಲಾ ಅಸಹ್ಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು. 42 ಹೊಟ್ಟೆಯಿಂದ ಹರಿದು ಹೋಗುವುದನ್ನು, ಕಾಲಿನಿಂದ ಹರಿದಾಡುವಂಥದನ್ನು, ಬಹಳ ಕಾಲುಳ್ಳದ್ದನ್ನು ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನು ನೀವು ತಿನ್ನಬಾರದು; ಅವು ಅಸಹ್ಯವಾಗಿವೆ. 43 ನೀವು ಅಂತಹ ಯಾವ ಸಣ್ಣ ಜೀವಿಯನ್ನು ತಿಂದು ನಿಮ್ಮನ್ನು ನೀವೇ ಹೇಸಿಗೆಮಾಡಿಕೊಂಡು ಅಶುದ್ಧರಾಗಬಾರದು. 44 ಏಕೆಂದರೆ ನಾನು ನಿಮ್ಮ ದೇವರಾದ ಯೆಹೋವನು; ನೀವು ದೇವಜನರಿಗೆ ತಕ್ಕಂತೆ ಇರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. 45 ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಯೆಹೋವನು ನಾನೇ; ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. 46 “‘ಇದೇ ಪಶು, ಪಕ್ಷಿ, ಜಲಚರ ಮತ್ತು ಕ್ರಿಮಿಕೀಟಗಳ ವಿಷಯವಾದ ನಿಯಮ. 47 ಇದರಿಂದ ಶುದ್ಧ ಹಾಗು ಅಶುದ್ಧಗಳನ್ನು, ತಿನ್ನಬಹುದಾದ ಜೀವಿಗಳು ಮತ್ತು ತಿನ್ನಬಾರದಾದ ಜೀವಿಗಳ ಕುರಿತು ವಿವೇಚಿಸುವುದಕ್ಕೆ ನಿಮ್ಮಿಂದಾಗುವುದು.’” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.