Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಕಷ್ಟಗಳನ್ನೂ ದುಷ್ಪ್ರೇರಣೆಗಳನ್ನೂ ಕುರಿತದ್ದು

1 ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”

2 ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.

3 ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.

4 ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.

5 ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.

6 ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.

7 ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.

8 ಏಕೆಂದರೆ ಅವನು ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.

9 ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.

10 ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.

11 ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು.

12 ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.

13 ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ.

14 ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.

15 ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.

16 ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.

17 ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

18 ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.


ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವ ವಿಧಾನ

19 ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.

20 ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

21 ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.

22 ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.

23 ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು.

24 ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.

25 ಆದರೆ ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು.

26 ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.

27 ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು