ಮೀಕ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಚೀಯೋನಿನ ಮುಂದಿನ ಪ್ರಖ್ಯಾತಿ 1 ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡ ಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವರು. 2 ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು. 3 ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು. ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ. 4 ಒಬ್ಬೊಬ್ಬನು ತನ್ನ ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರನ್ನು ಯಾರೂ ಹೆದರಿಸರು. ಸೇನಾಧೀಶ್ವರನಾದ ಯೆಹೋವನೇ ಇದನ್ನು ನುಡಿದಿದ್ದಾನೆ. 5 ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ. ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತದವರೆಗೆ ನಡೆಯುವೆವು. ಇಸ್ರಾಯೇಲರು ಸೆರೆವಾಸದಿಂದ ಹಿಂದಿರುಗುವರು 6 ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ದೈಹಿಕವಾಗಿ ಊನವಾದ ಜನಾಂಗವನ್ನು ಒಟ್ಟುಗೂಡಿಸುವೆನು, ನಾನು ಬಾಧಿಸಿ ತಳ್ಳಿದ ಪ್ರಜೆಯನ್ನು ಸೇರಿಸುವೆನು. 7 ಆ ಊನವಾದ ಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು, ಯೆಹೋವನು ಚೀಯೋನ್ ಪರ್ವತದಲ್ಲಿ ಈ ದಿನದಿಂದ ಎಂದೆಂದಿಗೂ ಅವರ ರಾಜನಾಗಿರುವನು. 8 ಕುರಿಮಂದೆಗೆ ರಕ್ಷಣೆ ಕೊಡುವ ಗೋಪುರವೇ, ಚೀಯೋನ್ ಯುವತಿಯ ಸುಭದ್ರ ಕೋಟೆಯೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವುದು. ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವುದು. ಚೀಯೋನಿನ ಇಂದಿನ ಇಕ್ಕಟ್ಟು ಮುಂದಿನ ಜಯ 9 ನೀನೀಗ ರೋದಿಸುತ್ತಿರುವುದೇಕೆ? ಪ್ರಸವವೇದನೆಯಷ್ಟು ಕಠಿಣವಾದ ಯಾತನೆಯು ನಿನ್ನನ್ನು ಬಾಧಿಸುತ್ತಿರುವುದಕ್ಕೆ ಕಾರಣವೇನು? ನಿನ್ನಲ್ಲಿ ರಾಜನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶವಾದನೋ? 10 ಚೀಯೋನ್ ಯುವತಿಯೇ, ಹೆರುವವಳಂತೆ ವೇದನೆಗೆ ಒಳಗಾಗು, ಯಾತನೆಪಡು. ನೀನೀಗ ಪಟ್ಟಣದಿಂದ ಹೊರಟು ಕಾಡಿನಲ್ಲಿ ವಾಸಿಸುತ್ತಾ ಬಾಬೆಲಿಗೆ ಸೇರುವಿ. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ಯೆಹೋವನು ಶತ್ರುಗಳ ಕೈಯಿಂದ ನಿನ್ನನ್ನು ಬಿಡಿಸುವನು. 11 ‘ಯೆರೂಸಲೇಮ್ ಹೊಲಸಾಗಿ ಹೋಗಲಿ. ಚೀಯೋನಿನ ನಾಶನವನ್ನು ಕಣ್ಣು ತುಂಬಾ ನೋಡೋಣ’” ಎಂದು ಯೋಚಿಸುವ ಬಹು ಜನಾಂಗಗಳು ನಿನಗೆ ವಿರುದ್ಧವಾಗಿ ಕೂಡಿ ಬಂದಿವೆ. 12 ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಲಿಲ್ಲ, ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ. 13 ಚೀಯೋನ್ ನಗರಿಯೇ ಎದ್ದು ಒಕ್ಕಣೆ ಮಾಡು, ನಾನು ನಿನ್ನ ಕೊಂಬನ್ನು ಕಬ್ಬಿಣದ ಕೊಂಬನ್ನಾಗಿಯೂ, ನಿನ್ನ ಗೊರಸನ್ನು ತಾಮ್ರದ ಗೊರಸನ್ನಾಗಿಯೂ ಮಾಡುವೆನು. ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ, ಆ ದೇಶಗಳು ಕೊಳ್ಳೆ ಹೊಡೆದು ಸಂಪಾದಿಸಿದ್ದ ಐಶ್ವರ್ಯವನ್ನು ನೀನು ಯೆಹೋವನಿಗಾಗಿ ಮೀಸಲಾಗಿಡುವೆ. ಅವರ ಆಸ್ತಿಯನ್ನು ಲೋಕದ ಕರ್ತನ ಮುಂದೆ ಸಮರ್ಪಿಸುವಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.