ಮಾರ್ಕ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೇಸು ಕೈ ಬತ್ತಿಹೋದ ಮನುಷ್ಯನನ್ನು ಸ್ವಸ್ಥಪಡಿಸಿದ್ದು 1 ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು. 2 ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು. 3 ಆತನು ಕೈಬತ್ತಿದ್ದವನಿಗೆ, “ಎದ್ದು ನಡುವೆ ನಿಂತುಕೋ” ಎಂದು ಹೇಳಿದನು. 4 ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು. 5 ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು. 6 ತಕ್ಷಣ ಫರಿಸಾಯರು ಹೊರಕ್ಕೆ ಹೋಗಿ ಹೆರೋದ್ಯರನ್ನು ಕೂಡಿಕೊಂಡು ಯಾವ ಉಪಾಯದಿಂದ ಯೇಸುವನ್ನು ಕೊಲ್ಲಬಹುದು ಎಂದು ಆತನಿಗೆ ವಿರೋಧವಾಗಿ ಒಳಸಂಚುಮಾಡಿದರು. ಜನಪ್ರಿಯ ಯೇಸುವನ್ನು ಅನೇಕರು ಹಿಂಬಾಲಿಸಿದ್ದು ಮತ್ತಾ 10:1-4 ; ಲೂಕ 6:12-19 7 ಆ ಮೇಲೆ ಯೇಸುವು ತನ್ನ ಶಿಷ್ಯರೊಂದಿಗೆ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹು ಜನರ ಗುಂಪು ಆತನನ್ನು ಹಿಂಬಾಲಿಸಿತು. 8 ಇದಲ್ಲದೆ ಆತನು ಇಂಥಿಂಥ ಕೆಲಸಗಳನ್ನು ಮಾಡುತ್ತಾನೆಂದು ಕೇಳಿ ಬಹುಜನರು ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ಇದೂಮಾಯದಿಂದಲೂ, ಯೊರ್ದನ್ ಹೊಳೆಯ ಆಚೆಯಿಂದಲೂ, ತೂರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಆತನ ಬಳಿಗೆ ಬಂದರು. 9 ಜನರ ಗುಂಪು ಅಧಿಕವಾಗಿದ್ದುದರಿಂದ ಅವರು ತನ್ನ ಮೈಮೇಲೆ ಬಿದ್ದು ನೂಕದಂತೆ ಯೇಸು ತನಗೆ ಒಂದು ದೋಣಿಯನ್ನು ಸಿದ್ಧಮಾಡಲು ಶಿಷ್ಯರಿಗೆ ಹೇಳಿದನು. 10 ಏಕೆಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಮೇಲೆ ಬೀಳುತ್ತಿದ್ದರು. 11 ಮತ್ತು ದೆವ್ವಗಳು ಆತನನ್ನು ಕಂಡಾಗಲ್ಲೆಲ್ಲಾ ಆತನ ಪಾದಕ್ಕೆ ಬಿದ್ದು “ನೀನು ದೇವಕುಮಾರನು” ಎಂದು ಕೂಗುತ್ತಿದ್ದವು. 12 ಆದರೆ ಆತನು ತಾನು ಇಂಥವನೆಂಬುದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಆಜ್ಞಾಪಿಸಿದನು. ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ನೇಮಿಸಿದ್ದು 13 ಆ ಮೇಲೆ ಯೇಸು ಬೆಟ್ಟವನ್ನು ಹತ್ತಿ ತನಗೆ ಬೇಕಾದವರನ್ನು ಹತ್ತಿರಕ್ಕೆ ಕರೆಯಲು ಅವರು ಆತನ ಬಳಿಗೆ ಬಂದರು. 14 ಆತನು ಅಪೊಸ್ತಲರೆಂದು ಹೆಸರಿಟ್ಟಂಥ ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಬೇಕೆಂತಲೂ, ಸುವಾರ್ತೆಯನ್ನು ಸಾರುವುದಕ್ಕೆ ಅವರನ್ನು ಕಳುಹಿಸಬೇಕೆಂತಲೂ, 15 ದೆವ್ವಗಳನ್ನು ಬಿಡಿಸುವ ಅಧಿಕಾರ ಉಳ್ಳವರಾಗಿರಬೇಕೆಂತಲೂ ನೇಮಿಸಿದನು. 16 ಯೇಸುವಿನಿಂದ ನೇಮಿಸಲ್ಪಟ್ಟ ಹನ್ನೆರಡು ಮಂದಿ ಇವರೇ: ಸೀಮೋನನೆಂಬವನಿಗೆ ಪೇತ್ರನೆಂದು ಹೆಸರಿಟ್ಟನು. 17 ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಸಿಡಿಲ ಮರಿಗಳು ಎಂದು ಹೆಸರಿಟ್ಟನು. 18 ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ, 19 ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ. ಯೇಸುವು ಮತ್ತು ಬೆಲ್ಜೆಬೂಲನು ಮತ್ತಾ 12:22-32 , 46-50 ; ಲೂಕ 11:14-22 ; 8:19-21 20 ಆತನು ಮನೆಯೊಳಗೆ ಬಂದಾಗ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟ ಮಾಡಲು ಕೂಡ ಆಗಲಿಲ್ಲ. 21 ಇದನ್ನು ಕೇಳಿ ಆತನ ಬಂಧುಗಳು “ಅವನಿಗೆ ಹುಚ್ಚುಹಿಡಿದಿದೆ” ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು. 22 ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ” ಹೇಳುತ್ತಿದ್ದರು. 23 ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ, “ಸೈತಾನನು ಸೈತಾನನನ್ನು ಬಿಡಿಸುವುದುಂಟೇ? 24 ಯಾವುದೇ ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ಉಳಿಯದು; 25 ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು. 26 ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನು ಉಳಿಯದೆ ನಾಶವಾಗಿ ಹೋಗುವನು. 27 ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ನುಗ್ಗಿ ಅವನ ಆಸ್ತಿಯನ್ನು ಕದಿಯಲು ಸಾಧ್ಯವಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಕೊಳ್ಳೆಹೊಡೆಯಬಹುದು. 28 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಸಿಕ್ಕುವುದು. 29 ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು” ಎಂದು ಹೇಳಿದನು. 30 ಅವರು “ಈತನಲ್ಲಿ ಅಶುದ್ಧಾತ್ಮವಿದೆ” ಎಂದು ಹೇಳುತ್ತಿದ್ದರಿಂದ ಯೇಸು ಇದನ್ನು ಹೇಳಿದನು. ಯೇಸುವಿನ ತಾಯಿ ಹಾಗೂ ಸಹೋದರರು 31 ಜನರು ಯೇಸುವಿನ ಸುತ್ತಲು ಕುಳಿತುಕೊಂಡಿದ್ದಾಗ ಆತನ ತಾಯಿಯೂ, ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೆಕಳುಹಿಸಿದರು. 32 ಆ ಜನರು ಆತನಿಗೆ, “ನಿನ್ನ ತಾಯಿಯೂ, ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು” ಎಂದು ಹೇಳಿದರು. 33 ಅದಕ್ಕೆ ಆತನು ಅವರಿಗೆ, “ನನಗೆ ತಾಯಿಯೂ, ತಮ್ಮಂದಿರೂ ಯಾರು?” ಎಂದು ಹೇಳಿ ತನ್ನ ಸುತ್ತಲು ಕುಳಿತಿದ್ದವರನ್ನು ನೋಡಿ, 34 “ಇಗೋ, ನನ್ನ ತಾಯಿ, ನನ್ನ ತಮ್ಮಂದಿರು. 35 ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ, ತಂಗಿಯೂ, ತಾಯಿಯೂ ಆಗಿದ್ದಾರೆ” ಅಂದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.