Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಲಾಕಿ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 “ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

2 ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ.

3 ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.

4 ಆಗ ಯೆಹೂದದ ಮತ್ತು ಯೆರೂಸಲೇಮಿನ ನೈವೇದ್ಯವು, ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದಂತೆ ಆಗಿರುವುದು.

5 “ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

6 “ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”


ದಶಮಾಂಶ ಸಲ್ಲಿಸುವುದರಲ್ಲಿ ಮೋಸ

7 “ನಿಮ್ಮ ಪೂರ್ವಿಕರ ಕಾಲದಿಂದಲೂ ನೀವು ನನ್ನ ವಿಧಿಗಳನ್ನು ಅನುಸರಿಸಿ ನಡೆಯಲ್ಲಿಲ್ಲ. ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ, ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಯಾವ ವಿಷಯದಲ್ಲಿ ತಿರುಗೋಣ?” ಎನ್ನುತ್ತೀರಿ.

8 “ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ‘ನಿನ್ನಿಂದ ಏನು ಕದ್ದುಕೊಂಡಿದ್ದೇವೆ?’ ಎಂದು ಕೇಳುತ್ತೀರೋ. ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.

9 ನೀವು ಅಂದರೆ ಈ ಜನಾಂಗದವರೆಲ್ಲಾ ನನ್ನಿಂದ ಕದ್ದುಕೊಳ್ಳುವವರಾದ ಕಾರಣ ಶಾಪಗ್ರಸ್ತರಾಗಿದ್ದೀರಿ.

10 ನನ್ನ ಆಲಯವು ಆಹಾರದ ಕೊರತೆಯಿಲ್ಲದಂತೆ ನೀವು ದಶಮಾಂಶವನ್ನು ಯಾವಾಗಲೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ಎಂದು ಯೆಹೋವನಾದ ನನ್ನನ್ನು ಹೀಗೆ ಪರೀಕ್ಷಿಸಿರಿ.

11 ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು. ಅದು ನಿಮ್ಮ ಭೂಮಿಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷಿಯಹಣ್ಣು ತೋಟದಲ್ಲಿ ಉದುರಿಹೋಗದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

12 “ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.


ಅಪನಂಬಿಕೆಯ ಖಂಡನೆ ಮತ್ತು ಭಕ್ತರ ಮುಂದಿನ ಉತ್ಸಾಹ

13 “ನೀವು ನನಗೆ ವಿರುದ್ಧವಾಗಿ ಆಡಿದ ಮಾತುಗಳು ಬಹಳ ಕಠಿಣ” ಎಂದು ಯೆಹೋವನು ಅನ್ನುತ್ತಾನೆ. “ನಿನಗೆ ವಿರುದ್ಧವಾಗಿ ಏನು ಮಾಡಿದ್ದೇವೆ?” ಅನ್ನುತ್ತೀರಾ?

14 ನೀವು “ದೇವರನ್ನು ಸೇವಿಸುವುದು ವ್ಯರ್ಥ; ನಾವು ಆತನ ನಿಯಮವನ್ನು ಅನುಸರಿಸಿ ಸೇನಾಧೀಶ್ವರನಾದ ಯೆಹೋವನ ಮುಂದೆ ದುಃಖದಿಂದ ವಿಕಾರಿಗಳಾಗಿ ನಡೆದುಕೊಂಡದ್ದರಿಂದ ಆದ ಲಾಭವೇನು?

15 ಈಗ ಅಹಂಕಾರಿಗಳನ್ನು ಭಾಗ್ಯವಂತರೆಂದು ಕೊಂಡಾಡಬೇಕಾಗಿ ಬಂತು; ಹೌದು, ದುಷ್ಕರ್ಮಿಗಳು ಏಳಿಗೆಗೆ ಬಂದಿದ್ದಾರೆ, ದೇವರನ್ನು ಪರೀಕ್ಷಿಸಿದರೂ ಸುರಕ್ಷಿತರಾಗಿದ್ದಾರೆ” ಅಂದುಕೊಂಡಿದ್ದೀರಲ್ಲಾ.

16 ಇಂಥಾ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು, ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮ ಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.

17 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

18 ಆಗ ಶಿಷ್ಟರಿಗೂ, ದುಷ್ಟರಿಗೂ, ದೇವರನ್ನು ಸೇವಿಸುವವರಿಗೂ, ಸೇವಿಸದೇ ಇರುವವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಕಾಣುವಿರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು