Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಲಾಕಿ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಅಯೋಗ್ಯ ಯಾಜಕರ ಖಂಡನೆ

1 ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ.

2 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮನನಮಾಡಿ ಅರ್ಥಮಾಡಿಕೊಳ್ಳದಿದ್ದರೆ, ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳೆಲ್ಲವನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಳ್ಳದ ಕಾರಣ ನಾನು ನಿಮ್ಮನ್ನು ಶಪಿಸುತ್ತೇನೆ.

3 ಗಮನವಿಟ್ಟು ಕೇಳಿ, ನಿಮ್ಮ ಸಂತಾನ ಬೆಳೆಯದಂತೆ ಶಪಿಸುವೆ; ನಿಮ್ಮ ಮೇಲೆ ಯಜ್ಞಪಶುಗಳ ಸಗಣಿಯನ್ನು ಎರಚುವೆನು. ಈ ಅವಮಾನದಿಂದ ನೀವು ತಿಪ್ಪೆಯ ಪಾಲಾಗುವಿರಿ.

4 ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯು ನೆಲೆಗೊಳ್ಳಬೇಕೆಂದು ಈ ಅಪ್ಪಣೆಯನ್ನು ನಿಮಗೆ ಹೇಳಿಕಳುಹಿಸಿದ್ದೇನೆಂಬುದು ನಿಮಗೆ ಗೊತ್ತಾಗಬೇಕು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

5 “ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ, ಸುಖ ತರುವಂಥ ಒಡಂಬಡಿಕೆ. ಅವರು ಭಯ ಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದೆನು. ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಹೆದರಿ ನಡೆದುಕೊಂಡರು.

6 ಅವರ ಬಾಯಲ್ಲಿ ಸತ್ಯಬೋಧನೆಯು ನೆಲೆಸಿತ್ತು, ಅವರ ತುಟಿಗಳಲ್ಲಿ ಅಪವಾದದ ಮಾತುಗಳು ಬರಲಿಲ್ಲ. ಅವರು ಶಾಂತಿಯಿಂದಲೂ, ಸದ್ಧರ್ಮದಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಬಹು ಜನರನ್ನು ಪಾಪದ ಕಡೆಯಿಂದ ತಿರುಗಿಸಿದರು.

7 ಜ್ಞಾನಾನುಸಾರವಾಗಿ ಮಾತನಾಡುವುದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರನಾದ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳುವುದು ಧರ್ಮ. ನೀವೋ ದಾರಿತಪ್ಪಿದ್ದೀರಿ;

8 “ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

9 “ನೀವು ನನ್ನ ಮಾರ್ಗಗಳನ್ನು ಅನುಸರಿಸದೆ ನಿಮ್ಮ ಧರ್ಮನಿಯಮ ಉಪದೇಶದಲ್ಲಿ ಪಕ್ಷಪಾತ ತೋರಿಸಿದ್ದರಿಂದ ನಾನಂತೂ ನಿಮ್ಮನ್ನು ಎಲ್ಲಾ ಜನರ ಮುಂದೆ ಅವಮಾನ ಹೊಂದುವಂತೆ ಅವರು ನಿಮ್ಮನ್ನು ಹೀಯಾಳಿಸಿ ಕೀಳಾಗಿ ಕಾಣುವಂತೆ ಮಾಡುವೆನು.”


ಅವಿಧೇಯ ಗೃಹಸ್ಥರ ಖಂಡನೆ

10 ನಮ್ಮೆಲ್ಲರಿಗೂ ಒಬ್ಬನೇ ತಂದೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಮಾಡಿದ್ದನಲ್ಲವೇ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಹೊಲೆಮಾಡುವುದೇಕೆ?

11 ಯೆಹೂದವು ದ್ರೋಹಮಾಡಿದೆ, ಇಸ್ರಾಯೇಲಿನಲ್ಲಿಯೂ, ಯೆರೂಸಲೇಮಿನಲ್ಲಿಯೂ ಒಂದು ದುರಾಚಾರವು ನಡೆಯುತ್ತಿದೆ; ಯೆಹೂದವು ಅನ್ಯದೇವತೆಯನ್ನು ಆರಾಧಿಸುವ ಮಹಿಳೆಯರನ್ನು ಮದುವೆಯಾಗಿ ಯೆಹೋವನ ಪ್ರಿಯ ದೇವಾಲಯವನ್ನು ಹೊಲೆಗೆಡಿಸಿದೆ.

12 ಇಂಥ ಕೆಲಸವನ್ನು ನಡೆಸಿದ ಪ್ರತಿಯೊಬ್ಬನ ಕುಟುಂಬದಲ್ಲಿ ಎಬ್ಬಿಸುವವರಾಗಲಿ, ಉತ್ತರ ಕೊಡುವವರಾಗಲಿ ಎಲ್ಲರನ್ನೂ ಯೆಹೋವನು ಯಾಕೋಬಿನ ಗುಡಾರಗಳೊಳಗಿಂದ ನಿರ್ಮೂಲಮಾಡುವನು; ಸೇನಾಧೀಶ್ವರನಾದ ಯೆಹೋವನಿಗೆ ನೈವೇದ್ಯ ತಂದು ಅರ್ಪಿಸುವವನನ್ನು ಕಡಿದುಬಿಡುವನು.

13 ಇನ್ನೊಂದು ಕೆಲಸವನ್ನು ಮಾಡುತ್ತೀರಿ - ಯೆಹೋವನ ಯಜ್ಞವೇದಿಯನ್ನು ನರಳಾಟದಿಂದಲೂ, ಗೋಳಾಟದಿಂದಲೂ ಕಣ್ಣೀರಿನಿಂದಲೂ ತುಂಬಿಸಿ ಮುಚ್ಚುತ್ತೀರಿ; ಆದಕಾರಣ ಆತನು ನಿಮ್ಮ ನೈವೇದ್ಯವನ್ನು ಇನ್ನು ಲಕ್ಷಿಸನು, ನಿಮ್ಮ ಕೈಯಿಂದ ಅದನ್ನು ಪ್ರಸನ್ನನಾಗಿ ಸ್ವೀಕರಿಸನು.

14 “ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ.

15 ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.”

16 ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”


ನ್ಯಾಯತೀರ್ಪಿನ ದಿನ ಸನ್ನಿಹಿತ

17 ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ. “ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು. ಅವರೇ ಆತನಿಗೆ ಇಷ್ಟ. ನ್ಯಾಯತೀರಿಸುವ ದೇವರು ಎಲ್ಲಿದ್ದಾನೆ?” ಎಂದು ನೀವು ಕೇಳುವುದರಿಂದ ಆತನ ಗಮನದಲ್ಲಿ ಇದ್ದೀರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು