ಮತ್ತಾಯ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಕುಷ್ಠರೋಗಿಯನ್ನು ಸ್ವಸ್ಥ ಮಾಡಿದ್ದು ಮಾರ್ಕ 1:40-44 ; ಲೂಕ 5:12-14 1 “ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು. 2 ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು. 3 ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು. 4 ಆಗ ಯೇಸು ಅವನಿಗೆ; “ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;” ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು. ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು ಲೂಕ 7:1-10 , 13 , 28 , 29 5 ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು, 6 “ಕರ್ತನೇ, ನನ್ನ ಆಳು ಪಾರ್ಶ್ವವಾಯುವಿನ ನಿಮಿತ್ತ ತೀವ್ರವಾದ ನೋವಿನಿಂದ ಮನೆಯಲ್ಲಿ ಮಲಗಿ ನರಳುತ್ತಿದ್ದಾನೆ” ಎಂದು ಹೇಳಿದನು. 7 ಯೇಸು ಅವನಿಗೆ, “ನಾನು ಬಂದು ಅವನನ್ನು ವಾಸಿ ಮಾಡುತ್ತೇನೆ” ಎಂದು ಹೇಳಲು, 8 ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು. 9 ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ; ‘ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು. 10 ಯೇಸು ಇದನ್ನು ಕೇಳಿ ಆಶ್ಚರ್ಯಚಕಿತನಾದನು, ತನ್ನ ಹಿಂದೆ ಬರುತ್ತಿದ್ದವರಿಗೆ, “ನಾನು ಇಂಥಾ ಮಹತ್ತರವಾದ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. 11 ಇದಲ್ಲದೆ ನಿಮಗೆ ಹೇಳುವುದೇನಂದರೆ ಪೂರ್ವ ಪಶ್ಚಿಮ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಎಂಬುವವರ ಸಂಗಡ ಊಟಕ್ಕೆ ಕುಳಿತುಕೊಳ್ಳುವರು; 12 ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು. 13 ಬಳಿಕ ಯೇಸು ಆ ಶತಾಧಿಪತಿಗೆ, “ನೀನು ನಂಬಿದಂತೆ ನಿನಗಾಗಲಿ, ಹೋಗು” ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು. ಯೇಸುವಿನ ರೋಗನಿವಾರಕ ಕಾರ್ಯ ಮಾರ್ಕ 1:29-34 ; ಲೂಕ 4:38-41 14 ತರುವಾಯ ಯೇಸು ಪೇತ್ರನ ಮನೆಗೆ ಬಂದಾಗ, ಪೇತ್ರನ ಅತ್ತೆ ಜ್ವರದಲ್ಲಿ ಮಲಗಿರುವುದನ್ನು ಕಂಡು, ಆತನು ಆಕೆಯ ಕೈಯನ್ನು ಮುಟ್ಟಿದನು ತಕ್ಷಣವೇ 15 ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು. 16 ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು. 17 ಇದರಿಂದ “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು. ಶಿಷ್ಯರಾಗಬೇಕೆಂದಿರುವವರಿಗೆ ಬೆಲೆಕೊಡುವುದು ಅವಶ್ಯವೆಂದು ಯೇಸು ಬೋಧಿಸಿದ್ದು ಲೂಕ 9:57-60 18 ಯೇಸು ತನ್ನ ಸುತ್ತಲಿದ್ದ ಜನಗಳ ದೊಡ್ಡ ಗುಂಪುಗಳನ್ನು ಕಂಡು ಗಲಿಲಾಯ ಸಮುದ್ರದ ಆಚೆ ಭಾಗಕ್ಕೆ ಹೊರಟು ಹೋಗಬೇಕೆಂದು ಅಪ್ಪಣೆ ಕೊಟ್ಟನು. 19 ಆಗ ಒಬ್ಬ ಶಾಸ್ತ್ರಿಯು ಹತ್ತಿರಕ್ಕೆ ಬಂದು ಆತನಿಗೆ, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಲು, 20 ಯೇಸು ಅವನಿಗೆ, “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು. 21 ಶಿಷ್ಯರಲ್ಲಿ ಬೇರೊಬ್ಬನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅನ್ನಲಾಗಿ, 22 ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ” ಎಂದು ಹೇಳಿದನು. ಯೇಸು ಬಿರುಗಾಳಿಯನ್ನು ನಿಲ್ಲಿಸಿದ್ದು ಮಾರ್ಕ 4:35-41 ; ಲೂಕ 8:22-25 23 ಯೇಸು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. 24 ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು. 25 ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, “ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ” ಎಂದರು. 26 ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು. 27 ಆ ಜನರು ಬೆರಗಾಗಿ, “ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ” ಅಂದರು. ಯೇಸು ಇಬ್ಬರಿಂದ ಅನೇಕ ದೆವ್ವಗಳನ್ನು ಬಿಡಿಸಿದ್ದು ಮಾರ್ಕ 5:1-20 ; ಲೂಕ 8:26-39 28 ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರೂರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ. 29 ಅವರು, “ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ” ಎಂದು ಕೂಗಿದರು. 30 ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. 31 ಆ ದೆವ್ವಗಳು, “ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು” ಎಂದು ಬೇಡಿಕೊಂಡವು. 32 ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು. 33 ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು; 34 ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.