Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದ್ರಾಕ್ಷಾತೋಟದ ಕೂಲಿಯಾಳುಗಳ ಸಾಮ್ಯ

1 “ಪರಲೋಕ ರಾಜ್ಯವು ತನ್ನ ದ್ರಾಕ್ಷಾತೋಟಕ್ಕೆ ಕೂಲಿಯಾಳುಗಳನ್ನು ಗೊತ್ತುಮಾಡಲು ಬೆಳಗ್ಗೆ ಹೊರಟ ಒಬ್ಬ ತೋಟದ ಯಜಮಾನನಿಗೆ ಹೋಲಿಕೆಯಾಗಿದೆ.

2 ಅವನು ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿದ ನಂತರ ಅವರನ್ನು ದ್ರಾಕ್ಷಾತೋಟಕ್ಕೆ ಕಳುಹಿಸಿದನು.

3 ಅವನು ಪುನಃ ಸುಮಾರು ಒಂಭತ್ತು ಗಂಟೆಗೆ ಸಂತೆಯ ಸ್ಥಳಕ್ಕೆ ಹೋಗಿ ಕೆಲಸವಿಲ್ಲದೆ ಸುಮ್ಮನೇ ನಿಂತಿದ್ದ ಬೇರೆ ಕೆಲವರು ಕೂಲಿಯಾಳುಗಳನ್ನು ಕಂಡು,

4 ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅಂದನು. ಆಗ ಅವರು ಕೆಲಸಕ್ಕೆ ಹೋದರು.

5 ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು.

6 ಮತ್ತೊಂದು ಸಾರಿ ಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು.

7 ಅವರು ಅವನಿಗೆ, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಎಂದರು, ಆಗ ಅವನು ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ’ ಅಂದನು.

8 ಸಂಜೆಯಾದಾಗ ದ್ರಾಕ್ಷಾತೋಟದ ಯಜಮಾನನು ತನ್ನ ಮೇಲ್ವಿಚಾರಕನಿಗೆ, ‘ಆ ಕೂಲಿಯಾಳುಗಳನ್ನು ಕರೆದು ಕಡೆಗೆ ಬಂದವರಿಂದ ಪ್ರಾರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದು ಹೇಳಿದನು.

9 ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು.

10 ಮೊದಲು ಬಂದವರು ಬಂದಾಗ ತಮಗೆ, ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು.

11 ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರುದ್ಧವಾಗಿ ಗುಣಗುಟ್ಟಿ,

12 ‘ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ’ ಅಂದರು.

13 ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ, ‘ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ?

14 ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ.

15 ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ? ನಾನು ಉದಾರಿಯಾಗಿರುವುದಕ್ಕೆ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವಿ?’ ಎಂದು ಹೇಳಿದನು.

16 ಹೀಗೆ ಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು” ಎಂದು ಹೇಳಿದನು.


ಯೇಸು ತನ್ನ ಕಷ್ಟ, ಮರಣ, ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು
ಮಾರ್ಕ 10:32-34 ; ಲೂಕ 18:31-35

17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಏಕಾಂತವಾಗಿ ಪಕ್ಕಕ್ಕೆ ಕರೆದುಕೊಂಡು ಅವರಿಗೆ,

18 “ನೋಡಿರಿ ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೊಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು.

19 ಆತನನ್ನು ಅಪಹಾಸ್ಯ ಮಾಡುವುದಕ್ಕಾಗಿಯೂ ಚಾಟಿಗಳಿಂದ ಹೊಡೆಯುವುದಕ್ಕಾಗಿಯೂ ಶಿಲುಬೆಗೆ ಹಾಕುವುದಕ್ಕಾಗಿಯೂ ಅನ್ಯಜನರ ಕೈಗೆ ಒಪ್ಪಿಸುವರು. ಆದರೆ ಆತನು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು” ಎಂದು ಹೇಳಿದನು.


ಯಾಕೋಬ, ಯೋಹಾನರ ತಾಯಿಯ ಬೇಡಿಕೆ
ಮಾರ್ಕ 10:35-45

20 ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು.

21 ಆತನು ಆಕೆಯನ್ನು, “ನಿನ್ನ ಅಪೇಕ್ಷೆ ಏನು?” ಎಂದು ಕೇಳಲು ಆಕೆ ಆತನಿಗೆ, “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹ ಮಾಡಬೇಕು” ಅಂದಳು.

22 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು.

23 ಆಗ ಆತನು ಅವರಿಗೆ, “ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.

24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.

25 ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಬಲಾತ್ಕಾರದಿಂದ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು.

26 ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ.

27 ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ.

28 ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು” ಎಂದು ಹೇಳಿದನು.


ಯೇಸು ಇಬ್ಬರು ಕುರುಡರಿಗೆ ದೃಷ್ಟಿ ಕೊಟ್ಟದ್ದು
ಮಾರ್ಕ 10:46-52 ; ಲೂಕ 18:35-43

29 ಅವರು ಯೆರಿಕೋವಿನಿಂದ, ಹೊರಟುಹೋಗುತ್ತಿರುವಾಗ ಜನರ ದೊಡ್ಡ ಗುಂಪು ಆತನನ್ನು ಹಿಂಬಾಲಿಸಿತು.

30 ಆಗ ದಾರಿಯ ಮಗ್ಗುಲಲ್ಲಿ ಕುಳಿತಿದ್ದ ಕುರುಡರಿಬ್ಬರು ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ಕೇಳಿ, “ಕರ್ತನೇ, ದಾವೀದ ಕುಮಾರನೇ ನಮ್ಮನ್ನು ಕರುಣಿಸು” ಎಂದು ಕೂಗಿಕೊಂಡರು.

31 ಆದರೆ ಆ ಗುಂಪಿನವರು, ಸುಮ್ಮನಿರಿ ಎಂದು ಅವರನ್ನು ಗದರಿಸಿದರು. ಅವರಾದರೋ, “ಕರ್ತನೇ, ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಗಟ್ಟಿಯಾಗಿ ಕೂಗಿಕೊಂಡರು.

32 ಆಗ ಯೇಸು ನಿಂತು ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ?” ಎಂದು ಕೇಳಿದನು.

33 ಅವರು, “ಕರ್ತನೇ, ನಮ್ಮ ಕಣ್ಣುಗಳು ಕಾಣುವಂತೆ ಮಾಡು” ಅಂದರು.

34 ಆಗ ಯೇಸು ಕನಿಕರಪಟ್ಟು, ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರು ದೃಷ್ಟಿಯನ್ನು ಹೊಂದಿಕೊಂಡು ಆತನನ್ನು ಹಿಂಬಾಲಿಸಿದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು