Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಹೆರೋದನು ಸ್ನಾನಿಕನಾದ ಯೋಹಾನನ್ನು ಕೊಲ್ಲಿಸಿದ ಮೇಲೆ ಯೇಸುವಿನ ಸುದ್ದಿಯನ್ನು ಕೇಳಿ ದಿಗಿಲುಪಟ್ಟದ್ದು
ಮಾರ್ಕ 6:14-29 ; ಲೂಕ 9:7-9

1 ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ,

2 ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು.

3 ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದು ಕಟ್ಟಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು.

4 ಯೋಹಾನನು ಹೆರೋದನಿಗೆ “ನೀನು ಇವಳನ್ನು ಹೆಂಡತಿಯಾಗಿ ಇಟ್ಟುಕೊಂಡಿರುವುದು ನ್ಯಾಯವಲ್ಲವೆಂದು” ಹೇಳುತ್ತಿದ್ದನು.

5 ಹೆರೋದನು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟನು, ಏಕೆಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.

6 ಆದರೆ ಹೆರೋದನ ಹುಟ್ಟಿದ ದಿನದ ಹಬ್ಬವು ನಡೆಯುವಾಗ ಹೆರೋದ್ಯಳ ಮಗಳು ಬಂದಿದ್ದ ಅತಿಥಿಗಳ ಮುಂದೆ ನೃತ್ಯಮಾಡಿ ಹೆರೋದನನ್ನು ಮೆಚ್ಚಿಸಿದಳು.

7 ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು.

8 ಅವಳು ತನ್ನ ತಾಯಿಯ ಪ್ರೇರೇಪಣೆಗೆ ಒಳಗಾಗಿ, “ಸ್ನಾನಿಕ ಯೋಹಾನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡು” ಅಂದಳು.

9 ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು.

10 ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ಶಿರಚ್ಛೇದನಮಾಡಿ,

11 ಅವರು ಅವನ ತಲೆಯನ್ನು ಹರಿವಾಣದಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.

12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು. ಅನಂತರ ಯೇಸುವಿನ ಬಳಿಗೆ ಬಂದು ತಿಳಿಸಿದರು.


ಯೇಸು ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು
ಮಾರ್ಕ 6:30-44 ; ಲೂಕ 9:10-17 ; ಯೋಹಾ 6:1-14

13 ಯೇಸು ಅದನ್ನು ಕೇಳಿ ದೋಣಿಯನ್ನು ಹತ್ತಿ ಆ ಸ್ಥಳವನ್ನು ಬಿಟ್ಟು ಅಡವಿಯ ಸ್ಥಳಕ್ಕೆ ಹೋದನು. ಇದನ್ನು ಕೇಳಿದ ಜನರು ಗುಂಪು ಗುಂಪಾಗಿ ತಮ್ಮ ತಮ್ಮ ಪಟ್ಟಣಗಳಿಂದ ಕಾಲುನಡಿಗೆಯಿಂದ ಆತನನ್ನು ಹಿಂಬಾಲಿಸಿದರು.

14 ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.

15 ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು.

16 ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು.

17 ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ,

18 ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು.

19 ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು.

20 ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು.

21 ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.


ಯೇಸು ಸಮುದ್ರದ ಮೇಲೆ ನಡೆದದ್ದು
ಮಾರ್ಕ 6:45-52 ; ಯೋಹಾ 6:15-21

22 ಇದಾದ ಕೂಡಲೆ ಆತನು ತನ್ನ ಶಿಷ್ಯರಿಗೆ ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ನನಗೆ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಒತ್ತಾಯ ಮಾಡಿದನು.

23 ಆತನು ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಮೇಲೆ ಪ್ರಾರ್ಥನೆ ಮಾಡುವುದಕ್ಕಾಗಿ ಏಕಾಂಗಿಯಾಗಿ ಬೆಟ್ಟವನ್ನು ಹತ್ತಿದನು. ಮತ್ತು ಸಂಜೆಯಾದಾಗ ಆತನೊಬ್ಬನೇ ಅಲ್ಲಿ ಇದ್ದನು.

24 ಆದರೆ ದೋಣಿಯು ಸಮುದ್ರದ ನಡುವೆಯಿತ್ತು, ಎದುರು ಗಾಳಿ ಬೀಸುತ್ತಿದ್ದುದರಿಂದ ಅಲೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು.

25 ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು.

26 ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು.

27 ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು.

28 ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು,

29 ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು.

30 ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು.

31 ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ ಏಕೆ ಸಂದೇಹ ಪಟ್ಟೆ” ಎಂದು ಹೇಳಿದನು.

32 ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು.

33 ಆಗ ದೋಣಿಯಲ್ಲಿದ್ದ ಶಿಷ್ಯರು “ನಿಜವಾಗಿ ನೀನು ದೇವಕುಮಾರನು” ಎಂದು ಹೇಳಿ ಆತನನ್ನು ಆರಾಧಿಸಿದರು.

34 ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪಟ್ಟಣದ ದಡಕ್ಕೆ ಬಂದರು.

35 ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು.

36 ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು