Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಫಿಲಿಪ್ಪಿಯವರಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಹೀಗಿರಲಾಗಿ, ನನ್ನ ಸಹೋದರರೇ ಅತಿ ಪ್ರಿಯರೇ, ಹಾಗೂ ಆಪ್ತರೇ, ನನಗೆ ಸಂತೋಷವೂ ಕಿರೀಟವೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ, ಪ್ರಿಯರೇ.


ಉತ್ತೇಜನದ ಮಾತುಗಳು

2 ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ ಎಂದು ಯುವೊದ್ಯಳನ್ನೂ ಹಾಗೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.

3 ನನ್ನ ನಿಜವಾದ ಜೊತೆ ಸೇವಕನೇ, ಆ ಸ್ತ್ರೀಯರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಜೊತೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿವೆ.

4 ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ.

5 ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ, ಕರ್ತನು ಹತ್ತಿರವಾಗಿದ್ದಾನೆ.

6 ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ.

7 ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು.

8 ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

9 ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.


ಅವರು ದಾನಕ್ಕಾಗಿ ಕೃತಜ್ಞತೆ

10 ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ.

11 ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ.

12 ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ.

13 ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

14 ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು.

15 ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ.

16 ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಸಹಾಯವನ್ನು ಕೊಟ್ಟುಕಳುಹಿಸಿದಿರಲ್ಲಾ.

17 ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ.

18 ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಹೊಂದಿದ್ದೇನೆ. ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ.

19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಗಳನ್ನೂ ನೀಗಿಸುವನು.

20 ನಮ್ಮ ತಂದೆಯಾದ ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯುಂಟಾಗಲಿ. ಆಮೆನ್‍.


ವಂದನೆಗಳು

21 ಕ್ರಿಸ್ತ ಯೇಸುವಿನಲ್ಲಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ವಂದನೆಯನ್ನು ಹೇಳಿರಿ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.

22 ಇಲ್ಲಿರುವ ದೇವಜನರೆಲ್ಲರು ನಿಮ್ಮನ್ನು ವಂದಿಸುತ್ತಾರೆ. ವಿಶೇಷವಾಗಿ ಕೈಸರನ ಅರಮನೆಗೆ ಸೇರಿದವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.

23 ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು