ಫಿಲಿಪ್ಪಿಯವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ನಿಜವಾದ ನೀತಿ 1 ಕಡೆಯದಾಗಿ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು. 2 ಆ ನಾಯಿಗಳಿಗೆ ಎಚ್ಚರವಾಗಿರಿ, ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ. 3 ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ. 4 ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. 5 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ ನಾನು ಫರಿಸಾಯನು, 6 ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ. 7 ಆದರೆ, ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. 8 ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. 9 ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. 10 ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. 11 ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು. ಬಿರುದಿಗಾಗಿ ಓಟ 12 ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. 13 ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, 14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. 15 ನಮ್ಮಲ್ಲಿ ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. 16 ಅಂತೂ, ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ. 17 ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. 18 ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. 19 ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. 20 ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. 21 ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.