ಫಿಲಿಪ್ಪಿಯವರಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪೀಠಿಕೆ 1 ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ, 2 ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ. ಕೃತಜ್ಞತಾಸ್ತುತಿಯೂ ಪ್ರಾರ್ಥನೆಗಳೂ 3-4 ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ. 5 ನೀವು ಮೊದಲಿನಿಂದ ಇಂದಿನವರೆಗೂ ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ. 6 ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು. 7 ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಬಂಧನದಲ್ಲಿರುವಾಗಲೂ, ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ. 8 ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ. 9 ಮತ್ತು ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ. 10 ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ, ನಿರ್ಮಲರಾಗಿಯೂ, 11 ಯೇಸು ಕ್ರಿಸ್ತನ ಮೂಲಕವಾಗಿರುವ ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ. ಸುವಾರ್ತೆಯ ಅಭಿವೃದ್ಧಿ 12 ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು. 14 ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ. 15 ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ. 16 ಇವರಂತೂ ನಾನು ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ. 17 ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು ಪ್ರಸಿದ್ಧಿಪಡಿಸುತ್ತಾರೆ. 18 ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು. 19 ಯಾಕೆಂದರೆ ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಯೇಸು ಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು. 20 ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ. 22 ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು. 23 ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, ಇಲ್ಲಿಂದ ಹೊರಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ. 24 ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ. 25 ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ. 26 ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು. ಕ್ರೈಸ್ತರು ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂಬ ಬೋಧನೆ 27 ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. 28 ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ. 29 ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ. 30 ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಅದೇ ಹೋರಾಟವು ನಿಮಗೂ ಉಂಟು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.