ಪ್ರಸಂಗಿ 7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಜ್ಞಾನ 1 ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ, ಮತ್ತು ಜನನ ದಿನಕ್ಕಿಂತ ಮರಣ ದಿನವೇ ಮೇಲು. 2 ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವುದು ಲೇಸು. ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ, ಜೀವಂತನು ಇದನ್ನು ನೋಡಿ ತನ್ನ ಹೃದಯದಲ್ಲಿ ಸ್ಮರಿಸುವನು. 3 ನಗೆಗಿಂತ ದುಃಖವು ವಾಸಿ, ಮುಖವು ಸಪ್ಪಗಿರುವಲ್ಲಿ ಹೃದಯಕ್ಕೆ ಮೇಲು. 4 ದುಃಖದ ಮನೆಯು ಜ್ಞಾನಿಗಳ ಮನಸ್ಸಿಗೆ ನೆಲೆ, ಉಲ್ಲಾಸದ ಮನೆಯು ಮೂಢರ ಮನಸ್ಸಿಗೆ ನಿವಾಸ. 5 ಮೂಢರ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು. 6 ಮೂಢರ ನಗುವು ಮಡಿಕೆಯ ಕೆಳಗೆ ಉರಿಯುವ ಮುಳ್ಳಿನ ಚಟಪಟ ಶಬ್ದದ ಹಾಗೆಯೇ. ಇದೂ ಕೂಡ ವ್ಯರ್ಥ. 7 ದಬ್ಬಾಳಿಕೆಯು ಜ್ಞಾನಿಯನ್ನು ಮೂರ್ಖನನ್ನಾಗಿಸುತ್ತದೆ, ಲಂಚವು ಹೃದಯವನ್ನು ಕೆಡಿಸುತ್ತದೆ. 8 ಆದಿಗಿಂತ ಅಂತ್ಯವು ಲೇಸು; ಅಹಂಕಾರಿಗಿಂತ ತಾಳ್ಮೆಯುಳ್ಳವನು ಉತ್ತಮ. 9 ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ, ಕೋಪಕ್ಕೆ ಮೂಢರ ಎದೆಯೇ ಲೇಸು. 10 ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ. ನೀನು ಈ ವಿಷಯದಲ್ಲಿ ವಿಚಾರಿಸುವುದು ಜ್ಞಾನಕಾರ್ಯವಲ್ಲ. 11 ಜ್ಞಾನವು ಸ್ವತ್ತಿನಂತೆ ಪ್ರಯೋಜನಕರ. ಇದು ಲೋಕದಲ್ಲಿ ಜೀವಿಸುವವರಿಗೆ ಸ್ವತ್ತಿಗಿಂತ ಉತ್ತಮೋತ್ತಮವಾಗಿದೆ. 12 ಧನವು ಹೇಗೊ ಹಾಗೆ ಜ್ಞಾನವು ಆಶ್ರಯ. ಜ್ಞಾನಕ್ಕೆ ವಿಶೇಷವೇನೆಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬುದೇ. 13 ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವುದಕ್ಕೆ ಯಾರಿಂದಾದೀತು? 14 ಸುಖದ ದಿನದಲ್ಲಿ ಸುಖದಿಂದಿರು, ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವುದನ್ನೂ ಗ್ರಹಿಸಲಾರದಂತೆ, ದೇವರು ಇವುಗಳನ್ನು ಒಂದರ ಮೇಲೊಂದು ಬರಮಾಡಿದ್ದಾನೆ. 15 ನೀತಿವಂತನು ತನ್ನ ನೀತಿಯಲ್ಲಿಯೇ ನಶಿಸುವುದುಂಟು. ದುಷ್ಟನು ತನ್ನ ದುಷ್ಟತನದಲ್ಲಿಯೇ ಬಹಳ ದಿನ ಬದುಕುವುದುಂಟು. ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ. 16 ನೀನು ಅತಿಯಾಗಿ ನೀತಿವಂತನಾಗಿರಬೇಡ, ನಿನ್ನ ದೃಷ್ಟಿಯಲ್ಲಿ ನೀನು ಜ್ಞಾನಿಯಾಗಿರಬೇಡ. ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ? 17 ನೀನು ಅತಿಯಾಗಿ ದುಷ್ಟನಾಗಿರಬೇಡ ಇಲ್ಲವೇ ಮೂರ್ಖನಾಗಿರಬೇಡ, ಏಕೆ ಅಕಾಲ ಮರಣವನ್ನು ಹೊಂದುವಿ? 18 ನೀನು ಇದನ್ನು ಹಿಡಿದುಕೊಳ್ಳುವುದು ಒಳ್ಳೆಯದು, ಅದರಿಂದ ಕೈಯನ್ನು ಹಿಂತೆಗೆಯಬೇಡ. ದೇವರಿಗೆ ಭಯಪಡುವವನು ಅವೆಲ್ಲವುಗಳಿಂದ ಪಾರಾಗುವನು. 19 ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನಿಗೆ ಜ್ಞಾನದಿಂದ ಉಂಟಾಗುವ ಬಲವು ಹೆಚ್ಚು. 20 ಪಾಪಮಾಡದೇ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷರು ಲೋಕದಲ್ಲಿ ಇಲ್ಲವೇ ಇಲ್ಲ. 21 ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು, ನಿನ್ನ ಆಳು ನಿನ್ನನ್ನು ಶಪಿಸುವುದು ಕಿವಿಗೆ ಬಿದ್ದೀತು. 22 ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದಿ ಎಂಬುದಕ್ಕೆ ನಿನ್ನ ಮನಸ್ಸೇ ಸಾಕ್ಷಿ. 23 ಇದನ್ನೆಲ್ಲಾ ಜ್ಞಾನದಿಂದ ಪರೀಕ್ಷಿಸಿದೆನು. “ನಾನು ಜ್ಞಾನಿಯಾಗುವೆನು” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು. 24 ಜ್ಞಾನವು ಬಹಳ ದೂರದಲ್ಲಿಯೂ, ಅಗಾಧದಲ್ಲಿಯೂ ಇದೆ. ಅದನ್ನು ಯಾರು ಕಂಡುಕೊಂಡಾರು? 25 ನಾನು ತಿರುಗಿಕೊಂಡು, ಜ್ಞಾನವನ್ನು ಮತ್ತು ಮೂಲತತ್ವವನ್ನು ಹುಡುಕಿ, ವಿಚಾರಿಸಿ ಗ್ರಹಿಸುವುದಕ್ಕೂ ಅಧರ್ಮವು ಮೂರ್ಖತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವುದಕ್ಕೂ ಮನಸ್ಸಿಟ್ಟೆನು. 26 ಆಗ ಮರಣಕ್ಕಿಂತ ಹೆಚ್ಚು ವಿಷವೊಂದು ಕಂಡುಬಂತು. ಯಾವುದೆಂದರೆ ಕೆಟ್ಟ ಹೆಂಗಸೇ. ಅವಳ ಹೃದಯವು ಉರುಲುಗಳೂ, ಬಲೆಗಳೂ, ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು. 27 ಪ್ರಸಂಗಿಯು ಹೀಗೆ ಹೇಳುತ್ತಾನೆ, “ನೋಡು, ನಾನು ಇದನ್ನು ಹುಡುಕಿ ಕಂಡುಕೊಂಡಿದ್ದೇನೆ” ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ಉತ್ತರ ಸಿಕ್ಕಲಿಲ್ಲ. 28 ಸಹಸ್ರ ಪುರುಷರಲ್ಲಿ ಯೋಗ್ಯನೊಬ್ಬನನ್ನು ಕಂಡಿದ್ದರೂ ಕಂಡಿರಬಹುದು, ಆದರೆ ಸಹಸ್ರ ಸ್ತ್ರೀಯರಲ್ಲಿ ಯೋಗ್ಯಳೊಬ್ಬಳನ್ನೂ ಕಂಡಿಲ್ಲ. 29 ದೇವರು ಮನುಷ್ಯರನ್ನು ಸತ್ಯವಂತನನ್ನಾಗಿ ಸೃಷ್ಟಿಸಿದನು. ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.