ಪ್ರಲಾಪಗಳು 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆರೂಸಲೇಮಿಗೆ ಯೆಹೋವನು ಕೊಟ್ಟ ಶಿಕ್ಷೆ 1 ಅಯ್ಯೋ, ಕರ್ತನು ಕೋಪಗೊಂಡು ಚೀಯೋನ್ ನಗರಿಗೆ ಮೋಡವು ಕವಿಯುವಂತೆ ಮಾಡಿದ್ದಾನಲ್ಲಾ! ಆತನು ತನ್ನ ಸಿಟ್ಟನ್ನು ತೀರಿಸಿಕೊಂಡ ದಿನದಲ್ಲಿ ತನ್ನ ಪಾದಪೀಠವನ್ನು ನೆನಪಿಗೆ ತಾರದೆ ಇಸ್ರಾಯೇಲಿನ ಶಿರೋಮಣಿಯನ್ನು ಆಕಾಶದಿಂದ ಭೂಮಿಗೆ ತಳ್ಳಿಬಿಟ್ಟನು. 2 ಕರ್ತನು ಕನಿಕರಪಡದೆ ಯಾಕೋಬಿನ ಗೋಮಾಳಗಳನ್ನು ನಾಶಪಡಿಸಿ, ಯೆಹೂದದ ಕೋಟೆಗಳನ್ನು ರೌದ್ರದಿಂದ ಕೆಡವಿ ನೆಲಸಮಮಾಡಿ, ರಾಜ್ಯವನ್ನೂ ಮತ್ತು ಅಲ್ಲಿನ ಸರದಾರರನ್ನೂ ಹೀನಸ್ಥಿತಿಗೆ ತಂದಿದ್ದಾನೆ. 3 ಆತನು ಶತ್ರುವಿನ ಮೇಲೆತ್ತಿದ ಬಲಗೈಯನ್ನು ಹಿಂದೆಗೆದು, ಇಸ್ರಾಯೇಲಿನ ಕೊಂಬನ್ನು ರೋಷಾಗ್ನಿಯಿಂದ ತೀರಾ ಕಡಿದುಹಾಕಿ, ಸುತ್ತಮುತ್ತಲು ನುಂಗುವ ಅಗ್ನಿಜ್ವಾಲೆಯಂತೆ ಯಾಕೋಬನ್ನು ದಹಿಸಿಬಿಟ್ಟಿದ್ದಾನೆ. 4 ವೈರಿಯ ಹಾಗೆ ಬಿಲ್ಲನ್ನು ಬೊಗ್ಗಿಸಿ, ವಿರೋಧಿಯಂತೆ ಬಲಗೈಯೆತ್ತಿ ನಿಂತು, ಸುಂದರ ಪ್ರಜೆಯನ್ನೆಲ್ಲಾ ಸಂಹರಿಸಿದ್ದಾನೆ; ಚೀಯೋನ್ ಗುಡಾರದ ಮೇಲೆ ತನ್ನ ರೋಷಾಗ್ನಿಯನ್ನು ಸುರಿಸಿದ್ದಾನೆ. 5 ಕರ್ತನು ವೈರಿಯಾಗಿ ಇಸ್ರಾಯೇಲನ್ನು ನುಂಗಿದ್ದಾನೆ; ಅದರ ಅರಮನೆಗಳನ್ನೆಲ್ಲಾ ತಿಂದುಬಿಟ್ಟು ಅದರ ಕೋಟೆಕೊತ್ತಲಗಳನ್ನು ನಾಶಮಾಡಿದ್ದಾನೆ; ಯೆಹೂದ ಸೀಮೆಯಲ್ಲಿ ಪ್ರಲಾಪ ಮತ್ತು ಗೋಳಾಟವನ್ನು ಹೆಚ್ಚಿಸಿದ್ದಾನೆ. 6 ತನ್ನ ಸಾನ್ನಿಧ್ಯದ ಗುಡಾರವನ್ನು ತೋಟದ ಗುಡಿಸಲನ್ನೋ ಎಂಬಂತೆ ಹಾಳುಮಾಡಿ, ತನ್ನ ಉತ್ಸವಸ್ಥಾನವನ್ನು ನಾಶಪಡಿಸಿದ್ದಾನೆ; ಮಹೋತ್ಸವಗಳು ಮತ್ತು ಸಬ್ಬತ್ ದಿನಗಳು ಚೀಯೋನಿನಲ್ಲಿ ಯಾರ ನೆನಪಿಗೂ ಬಾರದಂತೆ ಮಾಡಿ ಯೆಹೋವನು ಅತಿರೋಷಗೊಂಡು ರಾಜನನ್ನೂ ಮತ್ತು ಯಾಜಕರನ್ನೂ ಧಿಕ್ಕರಿಸಿದ್ದಾನೆ. 7 ಕರ್ತನು ತನ್ನ ಯಜ್ಞವೇದಿಯನ್ನು ತಿರಸ್ಕರಿಸಿ, ತನ್ನ ಪವಿತ್ರಾಲಯಕ್ಕೆ ಅಸಹ್ಯಪಟ್ಟು, ಚೀಯೋನಿನ ಅರಮನೆಗಳ ಗೋಡೆಗಳನ್ನು ಶತ್ರು ವಶಮಾಡಿದ್ದಾನೆ; ಉತ್ಸವದಿನದಲ್ಲಿ ಘೋಷಿಸುವಂತೆ ಶತ್ರುಗಳು ಯೆಹೋವನ ಮಂದಿರದಲ್ಲಿ ಜಯಘೋಷವೆತ್ತಿದ್ದಾರೆ. 8 ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳು ಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಮತ್ತು ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ. 9 ಚೀಯೋನಿನ ಹೆಬ್ಬಾಗಿಲುಗಳು ನೆಲದಲ್ಲಿ ಹೂತುಕೊಂಡಿವೆ; ಅದರ ಅಗುಳಿಗಳನ್ನು ಮುರಿದು ಚೂರು ಚೂರು ಮಾಡಿದ್ದಾನೆ; ಅದರ ಅರಸನೂ ಮತ್ತು ಸರದಾರರೂ ಮೋಶೆಯ ಧರ್ಮೋಪದೇಶವನ್ನು ಬೋಧಿಸದ ಅನ್ಯಜನಾಂಗಗಳೊಳಗೆ ಸೇರಿಕೊಂಡಿದ್ದಾರೆ; ಅದರ ಪ್ರವಾದಿಗಳಿಗೆ ಯೆಹೋವನಿಂದ ಯಾವ ದರ್ಶನವೂ ಇಲ್ಲ. 10 ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು, ಗೋಣಿ ತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇಮಿನ ಕನ್ಯೆಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ. 11 ಕಣ್ಣೀರು ಸುರಿಸಿ ಸುರಿಸಿ ನನ್ನ ಕಣ್ಣು ಇಂಗಿ ಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಕನ್ಯೆಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದುದರಿಂದ ನನ್ನ ಕರುಳು ಕರಗಿದೆ. 12 ಮಕ್ಕಳು ಗಾಯಪಟ್ಟವರಂತೆ ಪಟ್ಟಣದ ಚೌಕಗಳಲ್ಲಿ ಮೂರ್ಛೆಹೋಗಿ ತಾಯಿಯ ಎದೆಯ ಮೇಲೆ ಬಿದ್ದು, “ಅಮ್ಮಾ ತಿನ್ನಲಿಕ್ಕೆ ಧಾನ್ಯ ಇಲ್ಲವೋ? ಕುಡಿಯಲಿಕ್ಕೆ ದ್ರಾಕ್ಷಿಯರಸ ಇಲ್ಲವೋ?” ಎಂದು ಗೋಳಿಡುತ್ತವೆ. 13 ಯೆರೂಸಲೇಮ್ ಕನ್ಯೆಯೇ, ನಾನು ನಿನಗೆ ಏನು ಹೇಳಲಿ, ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಚೀಯೋನ್ ಕನ್ಯೆಯೇ, ನಿನ್ನನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಎಲ್ಲಿಂದ ತರಲಿ? ನಿನ್ನ ನಾಶನವು ಸಾಗರದಷ್ಟು ಅಪಾರ, ನಿನ್ನನ್ನು ಯಾರು ಸ್ವಸ್ಥಮಾಡಬಲ್ಲರು? 14 ನಿನ್ನ ಪ್ರವಾದಿಗಳು ಕಂಡ ದರ್ಶನ, ಹೇಳಿದ ಪ್ರವಾದನೆಯ ವಾಕ್ಯಗಳು ವ್ಯರ್ಥ, ನಿಸ್ಸಾರ; ಅವರು ನಿನ್ನ ದೋಷವನ್ನು ಬೈಲಿಗೆ ತಾರದ ಕಾರಣ ನಿನ್ನ ದುರವಸ್ಥೆಯು ನೀಗಲಿಲ್ಲ; ನಿನ್ನ ವಿಷಯವಾಗಿ ಅವರಿಗೆ ಕಂಡುಬಂದ ವ್ಯರ್ಥ ದೈವೋಕ್ತಿಗಳು ನೀನು ಗಡೀಪಾರಾಗಿ ಒಯ್ಯಲ್ಪಡುವುದಕ್ಕೆ ಆಸ್ಪದವಾದವು. 15 ಹಾದುಹೋಗುವವರೆಲ್ಲರೂ ನಿನ್ನನ್ನು ನೋಡಿ ಚಪ್ಪಾಳೆಹೊಡೆಯುತ್ತಾರೆ, ಯೆರೂಸಲೇಮ್ ನಗರಿಯನ್ನು ಕಂಡು, “ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕ ಸಂತೋಷಿಣಿ ಎನ್ನಿಸಿಕೊಳ್ಳುತ್ತಿದ್ದ ಪುರಿಯು ಇದೇ ಏನು? ಛೀ ಛೀ” ಎಂದು ತಲೆಯಾಡಿಸುತ್ತಾರೆ. 16 ನಿನ್ನ ಶತ್ರುಗಳೆಲ್ಲಾ ನಿನ್ನನ್ನು ನೋಡಿ ಬಾಯಿ ವ್ಯಂಗ್ಯವಾದ ನಗುವಿನಿಂದ ಟೀಕಿಸುತ್ತಾರೆ, ಛೀಗುಟ್ಟಿ, ಹಲ್ಲು ಕಡಿಯುತ್ತಾರೆ; ಆಹಾ, ಆಕೆಯನ್ನು ನುಂಗಿಬಿಟ್ಟಿದ್ದೇವೆ, ನಾವು ನಿರೀಕ್ಷಿಸುತ್ತಿದ್ದ ದಿನವು ಇದೇ, ಈಗ ಬಂದೊದಗಿತು, ಅದನ್ನು ಕಣ್ಣಾರೆ ಕಂಡೆವು ಅಂದುಕೊಳ್ಳುತ್ತಾರೆ. 17 ಯೆಹೋವನು ತನ್ನ ಸಂಕಲ್ಪವನ್ನು ಸಿದ್ಧಿಗೆ ತಂದು ತಾನು ಪುರಾತನಕಾಲದಲ್ಲಿ ನುಡಿದ ಮಾತನ್ನು ಈಡೇರಿಸಿದ್ದಾನೆ; ಆತನು ಕರುಣಿಸದೆ ನಿನ್ನನ್ನು ಕೆಡವಿ, ನಿನ್ನ ವೈರಿಗಳಿಗೆ ಆನಂದವಾಗುವಂತೆ ಮಾಡಿ ನಿನ್ನ ವಿರೋಧಿಗಳ ಕೊಂಬನ್ನು ಎತ್ತಿದ್ದಾನೆ. 18 ನಿನ್ನ ಜನರು ಕರ್ತನಿಗೆ ಮನಃಪೂರ್ವಕವಾಗಿ ಮೊರೆಯಿಟ್ಟಿದ್ದಾರೆ; “ಚೀಯೋನ್ ನಗರಿಯ ಕೋಟೆಯವರೇ, ನಿಮ್ಮ ಕಣ್ಣೀರು ಹಗಲಿರುಳೂ ತೊರೆಯಂತೆ ಹರಿಯಲಿ, ನಿಮಗೆ ವಿರಾಮವೇ ಬೇಡ, ಅದು ನಿಮ್ಮ ನೇತ್ರದಿಂದ ನಿಲ್ಲದೆ ಸುರಿಯಲಿ; 19 ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ.” 20 ಯೆಹೋವನೇ, ಕಟಾಕ್ಷಿಸು; ನೀನು ಇಷ್ಟೆಲ್ಲಾ ಮಾಡಿದ್ದು ಯಾರಿಗೆಂಬುವುದನ್ನು ನೋಡು, ಹೆಂಗಸರು ತಮ್ಮ ಗರ್ಭಫಲವನ್ನು, ತಾವು ನಲಿದಾಡಿಸಿದ ಮಕ್ಕಳನ್ನು ತಾವೇ ಕೊಂದು ತಿನ್ನುವುದು ಘೋರವಾದ ಪಾಪವಲ್ಲವೇ! ಯಾಜಕರೂ ಮತ್ತು ಪ್ರವಾದಿಗಳೂ ಕರ್ತನ ಪವಿತ್ರಾಲಯದಲ್ಲಿ ಹತರಾಗಬೇಕೋ? 21 ಯುವಕರು ಮತ್ತು ವೃದ್ಧರು ಬೀದಿಗಳಲ್ಲಿ ನೆಲದ ಮೇಲೆ ಬಿದ್ದಿರುತ್ತಾರೆ, ನನ್ನ ತರುಣಿಯರು ಹಾಗು ತರುಣರು ಖಡ್ಗದಿಂದ ಹತರಾಗಿದ್ದಾರೆ; ನೀನು ಕೋಪತೀರಿಸಿಕೊಳ್ಳುವ ದಿನದಲ್ಲಿ ಅವರನ್ನು ಕೊಂದುಹಾಕಿದಿ, ಕನಿಕರಿಸದೆ ಸಂಹರಿಸಿದಿ. 22 ಮಹೋತ್ಸವಕ್ಕೆ ಕರೆಯಿಸಿದಂತೆ ನನ್ನನ್ನು ಹೆದರಿಸುವ ದಿಗಿಲುಗಳನ್ನು ನನ್ನ ಸುತ್ತುಮುತ್ತಲು ಕರೆಯಿಸಿದ್ದೀ; ಯೆಹೋವನು ಕೋಪತೀರಿಸಿಕೊಳ್ಳುವ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಿಲ್ಲ, ಯಾರೂ ಉಳಿಯಲಿಲ್ಲ; ನಾನು ನಲಿದಾಡಿಸಿ ಸಾಕಿದವರನ್ನು ನನ್ನ ಶತ್ರುವು ಸಂಹರಿಸಿದ್ದಾನೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.