Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಲಾಪಗಳು 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೂಸಲೇಮಿನವರ ದುಃಖ

1 ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು.

2 ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ; ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಯ ಮಿತ್ರರೆಲ್ಲಾ ದ್ರೋಹಮಾಡಿ ಶತ್ರುಗಳಾಗಿದ್ದಾರೆ.

3 ಯೆಹೂದವೆಂಬಾಕೆಯು ಘೋರವಾದ ಸೇವೆ ಮತ್ತು ಶ್ರಮೆಗಳಿಂದ ತಪ್ಪಿಸಿಕೊಳ್ಳಬೇಕೆಂದು ವಲಸೆಹೋಗಿದ್ದಾಳೆ; ಮ್ಲೇಚ್ಛರ ಮಧ್ಯದಲ್ಲಿ ನೆಮ್ಮದಿಯಿಲ್ಲದೆ ವಾಸಮಾಡುತ್ತಿದ್ದಾಳೆ; ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು.

4 ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.

5 ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಅಧಿಪತಿಗಳಾಗಿದ್ದಾರೆ, ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಎಳೆಕೂಸುಗಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ.

6 ಚೀಯೋನ್ ನಗರಿಯ ವೈಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಹಿಡಿಯಲು ಬೆನ್ನತ್ತಿದವರಿಗೆ ಬೆನ್ನುಕೊಟ್ಟು ಓಡಿಹೋಗಿದ್ದಾರೆ.

7 ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ವೈಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ. ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು.

8 ಯೆರೂಸಲೇಮು ಪಾಪಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಮುಖಮುಚ್ಚಿ ದುಃಖಿಸುತ್ತಾಳೆ.

9 ಆಕೆಯ ನೆರಿಗೆಯು ಹೊಲಸಾಗಿತ್ತು, ಮುಂದಿನ ಗತಿಯೇನೆಂದು ಮನಸ್ಸಿಗೆ ತರಲಿಲ್ಲ; ಆದಕಾರಣ ವಿಪರೀತ ಹೀನಸ್ಥಿತಿಯಲ್ಲಿ ಬಿದ್ದು ಬಿಟ್ಟಳು; ಸಂತೈಸುವವರೇ ಇಲ್ಲ. “ಯೆಹೋವನೇ, ನನ್ನ ಕಷ್ಟವನ್ನು ಲಕ್ಷಿಸು; ನನ್ನ ಶತ್ರು ಹೆಚ್ಚಳಪಡುತ್ತಾನಲ್ಲಾ” ಎಂದು ಮೊರೆಯಿಡುತ್ತಾಳೆ.

10 ವಿರೋಧಿಯು ಕೈಚಾಚಿ ಅವಳ ಭೋಗ್ಯವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; “ಮ್ಲೇಚ್ಛರು ನಿನ್ನ ಸಭೆಗೆ ಸೇರಬಾರದು” ಎಂದು ನೀನು ಆಜ್ಞಾಪಿಸಿದರೂ ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವುದನ್ನು ಆಕೆಯು ಕಾಣಬೇಕಾಯಿತು.

11 ಆಕೆಯ ಜನರೆಲ್ಲಾ ನರಳುತ್ತಾರೆ, ಅವರು ಅನ್ನವನ್ನು ಹುಡುಕಿಕೊಳ್ಳುವ ಗತಿ ಬಂತು, ಪ್ರಾಣಾಧಾರವಾದ ಆಹಾರಕ್ಕಾಗಿ ತಮ್ಮ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಟ್ಟಿದ್ದಾರೆ, “ಯೆಹೋವನೇ, ನೋಡು, ಕಟಾಕ್ಷಿಸು, ನಾನು ತುಚ್ಛಳಾದೆನಲ್ಲಾ” ಎಂದು ಪ್ರಲಾಪಿಸುತ್ತಾಳೆ.

12 ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿ ರೋಷಗೊಂಡು ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ.

13 ಆತನು ಮೇಲಣ ಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳನೆಲ್ಲಾ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.

14 ಆತನ ಕೈ, ನನ್ನ ದ್ರೋಹಗಳನ್ನು ನನ್ನ ಮೇಲೆ ನೊಗವು ಇರುವಂತೆ ನನ್ನನ್ನು ಬಿಗಿದಿದೆ. ಆ ದ್ರೋಹಗಳು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.

15 ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ಹೊರಳಾಡಿಸಿದ್ದಾನೆ; ನನ್ನ ಯುವಕರನ್ನು ಸದೆಬಡಿದಿದ್ದಾನೆ. ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; ಕರ್ತನು ಯೆಹೂದವೆಂಬ ಕನ್ಯೆಯನ್ನು ತೊಟ್ಟಿಯಲ್ಲಿನ ದ್ರಾಕ್ಷಿಯ ಹಾಗೆ ತುಳಿದಿದ್ದಾನೆ.

16 ಈ ವಿಪತ್ತುಗಳಿಂದ ಗೋಳಾಡುತ್ತಿರುವೆನು, ನನ್ನನ್ನು ಸಂತೈಸಿ ದಣಿವಾರಿಸತಕ್ಕವನು ದೂರವಾಗಿರುವುದರಿಂದ ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವುದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು.

17 ಚೀಯೋನ್ ನಗರಿಯು ಕೈಚಾಚಿ ಅಂಗಲಾಚಿದರೂ ಯಾರೂ ಸಂತೈಸರು; ಯಾಕೋಬಿನ ನೆರೆಹೊರೆಯವರು ಅದಕ್ಕೆ ವಿರೋಧಿಗಳಾಗಿರಲಿ ಎಂದು ಯೆಹೋವನು ತೀರ್ಮಾನಿಸಿದ್ದಾನೆ; ಯೆರೂಸಲೇಮು ಅವರ ನಡುವೆ ಹೊಲೆಯಾಗಿ ಬಿದ್ದಿದೆ.

18 ಯೆಹೋವನು ನೀತಿಸ್ವರೂಪನು, ನಾನಾದರೋ ಆತನ ಆಜ್ಞೆಗಳನ್ನು ಮೀರಿದ ದ್ರೋಹಿ; ಜನಾಂಗಗಳೇ, ನೀವೆಲ್ಲರೂ ಕಿವಿಗೊಡಿರಿ, ನನ್ನ ವ್ಯಥೆಯನ್ನು ನೋಡಿರಿ; ನನ್ನ ಕನ್ಯೆಯರು ಮತ್ತು ಯುವಕರು ಸೆರೆಹೋಗಿದ್ದಾರಲ್ಲಾ!

19 ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು, ನನ್ನ ಯಾಜಕರೂ ಮತ್ತು ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವುದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು.

20 ಯೆಹೋವನೇ, ಕಟಾಕ್ಷಿಸು; ನಾನು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ, ನನ್ನ ಕರುಳು ಕುದಿಯುತ್ತಿದೆ. ನಾನು ಕೇವಲ ದ್ರೋಹಮಾಡಿದ್ದರಿಂದ ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ; ಮನೆಯ ಹೊರಗೆ ಸಂಹಾರ, ಒಳಗೆ ಪ್ರಾಣಸಂಕಟ.

21 ಯಾರೂ ನನ್ನನ್ನು ಸಂತೈಸರು; ನನ್ನ ನರಳಾಟದ ಸುದ್ದಿಯು ನನ್ನ ವೈರಿಗಳ ಕಿವಿಗೆ ಬಿದ್ದಿದೆ; ನನ್ನ ಶತ್ರುಗಳೆಲ್ಲಾ ನನಗಾದ ಕೇಡಿನ ಸಮಾಚಾರವನ್ನು ಕೇಳಿ ಅದನ್ನು ಮಾಡಿದವನು ನೀನೇ ಎಂದು ಉಲ್ಲಾಸಪಡುತ್ತಾರೆ. ನೀನು ಮುಂತಿಳಿಸಿದ ದಿನವನ್ನು ಬರಮಾಡುವಾಗ ನನಗಾದ ಗತಿಯು ಅವರಿಗೂ ಆಗಲಿ!

22 ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿಹೋಗಿದೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು