ಪ್ರಕಟನೆ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು. 2 ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. 3 ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು. 4 ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. 5 ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. 6 ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು. 7 ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. 8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. 9 ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. 10 ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. 11 ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು. 12 ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು. 13 ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. 14 ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು. 16 ಕುದುರೆ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು. 17 ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು. 18 ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು. 19 ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು. 20 ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ. 21 ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.