ಪ್ರಕಟನೆ 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಸುರುಳಿಯೂ ಕುರಿಮರಿಯೂ 1 ನಾನು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. 2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು. 3 ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. 4 ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. 5 ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು. 6 ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ. 7 ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು. 8 ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು. 9 ಅವರು ಹೊಸಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ. 10 ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, ಯಾಜಕರನ್ನಾಗಿಯೂ ಮಾಡಿರುವೆ. ಅವರು ಭೂಮಿಯನ್ನು ಆಳುವರು.” 11 ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು. 12 ಅವರು “ವಧಿಸಲ್ಪಟ್ಟ ಕುರಿಮರಿಯು ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು” ಎಂದು ಮಹಾಧ್ವನಿಯಿಂದ ಹಾಡಿದರು. 13 ಇದಲ್ಲದೆ ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ, “ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ” ಎಂದು ಹೇಳುವುದನ್ನು ಕೇಳಿದೆನು. 14 ಆಗ ನಾಲ್ಕು ಜೀವಿಗಳು “ಆಮೆನ್” ಅಂದವು ಮತ್ತು ಹಿರಿಯರು ಅಡ್ಡಬಿದ್ದು ಆರಾಧಿಸಿದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.