ಪ್ರಕಟನೆ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಎಫೆಸ ಸಭೆಗೆ ಸಂದೇಶ 1 “ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ, ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ಸಂಚರಿಸುವಾತನು ಹೇಳುವುದೇನಂದರೆ, 2 “ನಿನ್ನ ಕೃತ್ಯಗಳನ್ನೂ, ಪ್ರಯಾಸವನ್ನೂ, ತಾಳ್ಮೆಯನ್ನೂ, ಬಲ್ಲೆನು. ನೀನು ದುರ್ಜನರನ್ನು ಸಹಿಸಲಾರೆ, ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ. 3 ನೀನು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡರೂ ಬಿದ್ದುಹೋಗದೆ ಇದ್ದುದನ್ನು ನಾನು ಬಲ್ಲೆನು. 4 ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ. ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ. 5 ಆದ್ದರಿಂದ ನೀನು ಎಲ್ಲಿಂದ ಬಿದ್ದಿರುವಿಯೋ ಅದನ್ನು ನಿನ್ನ ನೆನಪಿಗೆ ತಂದುಕೋ. ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ಮಾನಸಾಂತರಪಡದಿದ್ದರೆ ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು. 6 ಆದರೆ ನಿನ್ನಲ್ಲಿ ಒಳ್ಳೆಯದು ಒಂದುಂಟು, ಅದೇನೆಂದರೆ ನಾನು ದ್ವೇಷಿಸುವ ನಿಕೊಲಾಯಿತರ ಕೃತ್ಯಗಳನ್ನು ನೀನೂ ಸಹ ದ್ವೇಷಿಸುತ್ತಿರುವಿ. 7 ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು. ಸ್ಮುರ್ನದ ಸಭೆಗೆ ಸಂದೇಶ 8 “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ, ಆದಿಯು, ಅಂತ್ಯವೂ ಆಗಿರುವಾತನು, ಸತ್ತವನಾಗಿದ್ದು ಜೀವಿತನಾಗಿ ಎದ್ದು ಬಂದಾತನೂ ಹೇಳುವುದೇನಂದರೆ, 9 ನಾನು ನಿನ್ನ ಸಂಕಟವನ್ನೂ ನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ವರ್ಯವಂತನೇ. ಇದಲ್ಲದೆ ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನ ಸಭಾಮಂದಿರದವರಾಗಿದ್ದಾರೆ. 10 ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತು ಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವ ತನಕ ನಂಬಿಗಸ್ತನಾಗಿರು, ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು. 11 ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ. ಪೆರ್ಗಮದ ಸಭೆಗೆ ಸಂದೇಶ 12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ, ಹರಿತವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳುವುದೇನಂದರೆ, 13 ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು. ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ. 14 ಕೆಲವು ವಿಷಯಗಳಲ್ಲಿ ನಿನ್ನ ವಿರುದ್ಧ ನನಗೆ ಅಪಾದನೆಗಳಿವೆ. ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ ಜಾರತ್ವದಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು ಬಿಳಾಮನು ಬಾಲಾಕನಿಗೆ ಕಲಿಸಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿ ಇದ್ದಾರೆ. 15 ಹಾಗೆಯೇ, ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿಮ್ಮಲ್ಲಿದ್ದಾರೆ. 16 ಆದ್ದರಿಂದ ನೀನು ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳದಿದ್ದರೆ ನಾನು ಬೇಗನೆ ನಿನ್ನ ಬಳಿಗೆ ಬಂದು ನನ್ನ ಬಾಯಿಂದ ಹೊರಬರುವ ಕತ್ತಿಯಿಂದ ಅವರ ಮೇಲೆ ಯುದ್ಧ ಮಾಡುವೆನು. 17 ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು. ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು. ಥುವತೈರದ ಸಭೆಗೆ ಸಂದೇಶ 18 “ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ, ಬೆಂಕಿಯ ಜ್ವಾಲೆಯಂತಿರುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವುದೇನಂದರೆ, 19 ನಿನ್ನ ಕೃತ್ಯಗಳನ್ನೂ, ನಿನ್ನ ಪ್ರೀತಿಯನ್ನೂ, ನಂಬಿಕೆಯನ್ನೂ, ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಮೇಲಾದದ್ದು ಎಂದು ಬಲ್ಲೆನು. 20 ನಿನ್ನ ವಿರುದ್ಧ ನನಗೆ ಅಪಾದನೆ ಒಂದಿದೆ. ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು, ಜಾರತ್ವಮಾಡಬಹುದೆಂದೂ ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಅನುಮತಿಯನ್ನು ಕೊಟ್ಟಿರುವಿ. 21 ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು, ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ. 22 ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು. 23 ಅವಳ ಮಕ್ಕಳನ್ನು ಕೊಲ್ಲುವೆನು. ಆಗ ನಾನು ಮನುಷ್ಯರ ಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು. 24 “ಆದರೆ ಥುವತೈರದಲ್ಲಿರುವ ಉಳಿದವರಿಗೆ, ಅಂದರೆ ಸೈತಾನನಿಂದ ಪ್ರೇರಿತವಾದ ದುರ್ಬೋಧನೆಯ ಆಳವನ್ನು ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನು ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲ. 25 ಆದರೆ ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಿ. 26-28 ಯಾವನು ಜಯಶಾಲಿಯಾಗಿ ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೆಯವರೆಗೂ ನಡಿಸುತ್ತಾನೋ, ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು, ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವುದು.’ ಇದಲ್ಲದೆ ಉದಯ ನಕ್ಷತ್ರವನ್ನು ಅವನಿಗೆ ಕೊಡುವೆನು. 29 ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.