Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “ಹಲ್ಲೆಲೂಯಾ. ರಕ್ಷಣೆಯೂ, ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.

2 ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಎಂದು ಹೇಳಿ,

3 ಎರಡನೆಯ ಸಾರಿ, “ಹಲ್ಲೆಲೂಯಾ ಎಂದು ಆರ್ಭಟಿಸಿ, ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ” ಎಂದು ಹೇಳಿದರು.

4 ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ, “ಆಮೆನ್, ಹಲ್ಲೆಲೂಯಾ” ಎಂದರು.


ಕುರಿಮರಿಯ ವಿವಾಹದ ಔತಣ

5 ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, “ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು ನಮ್ಮ ದೇವರನ್ನು ಕೊಂಡಾಡಿರಿ” ಎಂದು ಹೇಳಿತು.

6 ತರುವಾಯ ಬಹುದೊಡ್ಡ ಜನರ ಸಮೂಹದ ಶಬ್ದವು ಜಲಪ್ರವಾಹದ ಘೋಷದಂತೆಯೂ ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, “ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ.

7 ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು.

8 ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ).

9 ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, “ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿ, “ಈ ಮಾತುಗಳು ದೇವರ ಸತ್ಯವಚನಗಳಾಗಿವೆ” ಅಂದನು.

10 ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು ಅವನು, “ಹೀಗೆ ಮಾಡಬೇಡ ನೋಡು, ನಾನು ನಿನಗೂ, ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು.

11 ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ ನಂಬಿಗಸ್ತನು, ಸತ್ಯವಂತನು ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ.

12 ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತಿವೆ, ಆತನ ತಲೆಯ ಮೇಲೆ ಅನೇಕ ಕಿರೀಟಗಳುಂಟು, ಆತನಿಗೆ ಒಂದು ಹೆಸರು ಬರೆದುಕೊಡಲ್ಪಟ್ಟಿದೆ, ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.

13 ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.

14 ಪರಲೋಕದಲ್ಲಿರುವ ಸೈನ್ಯವು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು.

15 ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ. ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು. ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.

16 ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ “ರಾಜಾಧಿರಾಜನೂ ಕರ್ತಾಧಿ ಕರ್ತನೂ” ಎಂಬ ಹೆಸರು ಬರೆದಿದೆ.

17 ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ,

18 ರಾಜರ ಮಾಂಸವನ್ನೂ, ಸಹಸ್ರಾಧಿಪತಿಗಳ ಮಾಂಸವನ್ನೂ, ಪರಾಕ್ರಮಶಾಲಿಗಳ ಮಾಂಸವನ್ನೂ, ಕುದುರೆಗಳ ಮಾಂಸವನ್ನೂ, ಕುದುರೆ ಸವಾರರ ಮಾಂಸವನ್ನೂ, ಸ್ವತಂತ್ರರೂ, ದಾಸರೂ, ಶ್ರೇಷ್ಠರು ಮತ್ತು ಕನಿಷ್ಠರು ಇವರೆಲ್ಲರ ಮಾಂಸವನ್ನೂ ತಿನ್ನುವುದಕ್ಕೆ ಬನ್ನಿರಿ” ಎಂದು ಹೇಳಿದನು.

19 ತರುವಾಯ ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು.

20 ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಗೆ ಹಾಕಲಾಯಿತು.

21 ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು, ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು