Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 18 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಬಾಬೆಲಿನ ಪತನವು

1 ಇದಾದ ನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನ ತೇಜಸ್ಸಿನ ಪ್ರಭಾವದಿಂದ ಭೂಮಿಯು ಪ್ರಕಾಶವಾಯಿತು.

2 ಅವನು ಬಲವಾದ ಧ್ವನಿಯಿಂದ ಕೂಗುತ್ತಾ “ಬಿದ್ದಳು, ಬಿದ್ದಳು, ಬಾಬೆಲ್ ಎಂಬ ಮಹಾನಗರಿಯು ಬಿದ್ದಳು! ಅವಳು ದೆವ್ವಗಳ ವಾಸಸ್ಥಾನವೂ, ಎಲ್ಲಾ ದುರಾತ್ಮಗಳಿಗೂ, ಅಶುದ್ಧವಾದ ಹಾಗೂ ಅಸಹ್ಯವಾದ ಸಕಲ ವಿಧವಾದ ಪಕ್ಷಿಗಳಿಗೂ ಗೂಡೂ ಆದಳು.

3 ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.

4 ಪರಲೋಕದಿಂದ ಹೇಳುವ ಮತ್ತೊಂದು ಧ್ವನಿಯನ್ನು ಕೇಳಿದೆನು, “ನನ್ನ ಜನರೇ, ಅವಳನ್ನು ಬಿಟ್ಟು ಬನ್ನಿರಿ, ಏಕೆಂದರೆ ಅವಳ ಪಾಪಗಳಲ್ಲಿ ನೀವೂ ಪಾಲುಗಾರರಾಗಬಾರದು. ಅವಳಿಗೆ ಆಗುವ ಉಪದ್ರವಗಳು ನಿಮ್ಮನ್ನು ಬಾಧಿಸಬಾರದು.

5 ಅವಳ ಪಾಪಗಳು ಒಂದಕ್ಕೊಂದು ಸೇರಿ ಆಕಾಶದ ಎತ್ತರಕ್ಕೆ ಬೆಳೆದಿವೆ. ದೇವರು ಅವಳ ದುಷ್ಟಕೃತ್ಯಗಳನ್ನು ಜ್ಞಾಪಿಸಿಕೊಂಡಿದ್ದಾನೆ.

6 ಇತರರಿಗೆ ಅವಳು ಕೊಟ್ಟಿದ್ದಕ್ಕೆ ಸರಿಯಾಗಿ ಅವಳಿಗೆ ಹಿಂದಕ್ಕೆ ಕೊಡಿರಿ. ಅವಳ ಕೃತ್ಯಗಳಿಗೆ ಪ್ರತಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ಕಲಸಿಕೊಟ್ಟ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ಕಲಸಿ ಕೊಡಿರಿ.

7 ಅವಳು ಎಷ್ಟರ ಮಟ್ಟಿಗೆ ತನ್ನನ್ನು ಘನಪಡಿಸಿಕೊಂಡು ಸುಖಭೋಗವನ್ನು ಅನುಭವಿಸಿದಳೋ ಅದಕ್ಕೆ ತಕ್ಕಂತೆ ನೀವು ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ, ಏಕೆಂದರೆ ಅವಳು ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಎಂದೆಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾಳೆ.

8 ಆದ್ದರಿಂದ ಉಪದ್ರವಗಳು ಮರಣ, ಗೋಳಾಟ ಮತ್ತು ಕ್ಷಾಮಗಳು ಒಂದೇ ದಿನದಲ್ಲಿ ಅವಳಿಗೆ ಸಂಭವಿಸುವವು. ಅವಳಿಗೆ ತೀರ್ಪುಕೊಡುವ ಕರ್ತನಾದ ದೇವರು ಶಕ್ತನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುವಳು.

9-10 “ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ ದೂರದಲ್ಲಿ ನಿಂತು ಅಳುತ್ತಾ ಗೋಳಾಡುತ್ತಾ, ‘ಅಯ್ಯೋ ಅಯ್ಯೋ ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.

11 “ಇದಲ್ಲದೆ ಭೂಮಿಯ ವರ್ತಕರು ಅವಳಿಗಾಗಿ ದುಃಖಿಸಿ ಗೋಳಾಡುತ್ತಾ,

12 ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಷ್ಮೆ, ಕಡುಗೆಂಪು ಉಡುಪು ಸಕಲ ವಿಧವಾದ ಮರಮುಟ್ಟು ಮತ್ತು ದಂತದ ಸಾಮಾನುಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ, ಚಂದ್ರಕಾಂತ ಶಿಲೆ. ಸುಗಂಧ ಸರಕುಗಳಾದ

13 ಲವಂಗ, ಚಕ್ಕೆ, ಧೂಪ, ರಕ್ತಬೋಳ, ಸುಗಂಧತೈಲ, ದ್ರಾಕ್ಷಾರಸ, ಎಣ್ಣೆ, ನಯವಾದ ಹಿಟ್ಟು, ಗೋದಿ, ದನ, ಕುರಿ, ಕುದುರೆ, ರಥ, ಗುಲಾಮರು, ಮನುಷ್ಯಪ್ರಾಣಗಳು ಇವೇ ಮೊದಲಾದ ನಮ್ಮ ಸರಕುಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಗೋಳಾಡುವರು.

14 ‘ನೀನು ಬಯಸಿದ ನಿನ್ನ ಫಲಗಳು ನಿನ್ನನ್ನು ಬಿಟ್ಟು ಹೋದವು. ನಿನ್ನ ಎಲ್ಲಾ ವೈಭವವು ಹಾಗೂ ಶೋಭಾಯಮಾನವಾದ ಸೊಗಸುಗಳೆಲ್ಲ ನಿನ್ನಿಂದ ನಾಶವಾದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವುದೇ ಇಲ್ಲ.’

15 ಆ ಸರಕುಗಳನ್ನು ಮಾರಿ ಅವಳಿಂದ ಐಶ್ವರ್ಯವಂತರಾದ ವರ್ತಕರು ದೂರದಲ್ಲಿ ನಿಂತು ಅವಳ ಯಾತನೆಯ ದೆಸೆಯಿಂದ ಭಯಪಟ್ಟು ದುಃಖಿಸಿ ಗೋಳಾಡುತ್ತಾ,

16 ‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’

17 ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು,

18 ಅವಳ ದಹನದ ಹೊಗೆಯನ್ನು ನೋಡಿ ‘ಈ ಮಹಾ ಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಮೊರೆಯಿಡುವರು.

19 ಅನಂತರ ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು, ‘ಅಯ್ಯೋ ಅಯ್ಯೋ ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಅವಳ ಅಮೂಲ್ಯ ದ್ರವ್ಯಗಳಿಂದಲೇ ಐಶ್ವರ್ಯವಂತರಾದರಲ್ಲಾ, ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ’” ಎಂದು ಗೋಳಾಡುತ್ತಾ ದುಃಖಿಸುವರು.

20 ಪರಲೋಕವೇ, ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.

21 ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, “ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ.

22 ಬಾಬೆಲೇ ನಿನ್ನಲ್ಲಿ ವೀಣೆಗಾರರೂ, ವಾದ್ಯಗಾರರೂ, ಕೊಳಲು ಊದುವವರೂ, ತುತ್ತೂರಿಯವರೂ ಮೊದಲಾದವರ ಧ್ವನಿಯೂ ಇನ್ನೆಂದಿಗೂ ಕೇಳಿಸುವುದಿಲ್ಲ. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಇನ್ನೆಂದಿಗೂ ಕಾಣ ಸಿಕ್ಕುವುದಿಲ್ಲ. ಬೀಸುವ ಕಲ್ಲಿನ ಶಬ್ದವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸದು.

23 ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು.

24 “ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು