Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಬಾಬೆಲೆಂಬ ಜಾರಸ್ತ್ರೀಯ ನಾಶವು

1 ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, ಬಹಳ ನೀರುಗಳ ಮೇಲೆ ಕುಳಿತ್ತಿರುವ ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.

2 ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.

3 ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

4 ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.

5 ಅವಳ ಹಣೆಯ ಮೇಲೆ, “ಮಹತ್ತಾದ ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ” ಎಂಬ ಹೆಸರನ್ನು ಬರೆಯಲಾಗಿತ್ತು.

6 ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

7 ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ “ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ.

8 ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು ಅಧೋಲೋಕದೊಳಗಿನಿಂದ ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು.

9 “ಇದನ್ನು ಗ್ರಹಿಸಿಕೊಳ್ಳಲು ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ.

10 ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ.

11 ಇದಲ್ಲದೆ ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.

12 “ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು.

13 ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು.

14 ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.”

15 ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು.

16 ಇದಲ್ಲದೆ ನೀನು ನೋಡಿದ ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು.

17 ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು.

18 ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ ಮಹಾನಗರಿಯೇ ಆಗಿದೆ.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು