ಪ್ರಕಟನೆ 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಘಟಸರ್ಪ ಮತ್ತು ಸ್ತ್ರೀ 1 ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು. 2 ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು. 3 ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಏಳು ಕಿರೀಟಗಳು ಇದ್ದವು. 4 ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು. 5 ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. 6 ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು. 7 ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ ಅವನ ದೂತರೂ ಯುದ್ಧ ಮಾಡಿ ಕಾದಾಡಿದರು. 8 ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು. 9 ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು. 10 ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. 11 ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು. 12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು. 13 ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು. 14 ಆದರೆ ಆ ಸ್ತ್ರೀಯು ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಎರಡು ಕಾಲ, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. 15 ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು. 17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು, 18 ಸಮುದ್ರ ತೀರದ ಮರಳಿನ ಮೇಲೆ ನಿಂತನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.