ಪರಮಗೀತೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ರಾತ್ರಿಯಲ್ಲಿ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. 2 ನಾನು, “ಎದ್ದು ಊರಿನಲ್ಲಿ ತಿರುಗುವೆನು, ಬೀದಿಗಳಲ್ಲಿಯೂ, ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು” ಅಂದುಕೊಂಡೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. 3 ಊರಿನಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು, “ನನ್ನ ಪ್ರಾಣಪ್ರಿಯನನ್ನು ಕಂಡಿರಾ?” ಎಂದು ಅವರನ್ನು ವಿಚಾರಿಸಿದೆನು. 4 ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ ಸೇರುವ ತನಕ, ಬಿಡದೆ ಹಿಡಿದುಕೊಂಡೇ ಹೋದೆನು. 5 ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. ಮೂರನೆಯ ಗೀತೆ - ಸ್ತ್ರೀಯರು 6 ವರ್ತಕರು ಮಾರುವ ಸಕಲ ಸುಗಂಧತೈಲಗಳಿಂದ, ರಸಗಂಧ, ಸಾಂಬ್ರಾಣಿಧೂಪ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿಯಲ್ಲಿ ಹೊರಹೊಮ್ಮುತ್ತಿರುವ, ಅರಣ್ಯಮಾರ್ಗವಾಗಿ ಬರುತ್ತಿರುವ ಈ ಮೆರವಣಿಗೆ ಯಾರದು? 7 ಅದೋ, ನೋಡು ಸೊಲೊಮೋನನ ಪಲ್ಲಕ್ಕಿ, ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಜನರು ಅದರ ಸುತ್ತಲಿದ್ದಾರೆ. 8 ಯುದ್ಧಪ್ರವೀಣರಾದ ಇವರೆಲ್ಲರೂ ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬನೂ ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾನೆ. 9 ಆ ಪಲ್ಲಕ್ಕಿಯನ್ನು ರಾಜನಾದ ಸೊಲೊಮೋನನು ಲೆಬನೋನಿನ ಮರದಿಂದ ಮಾಡಿಸಿದ್ದಾನೆ. 10 ಅದರ ಕಂಬಗಳನ್ನು ಬೆಳ್ಳಿಯಿಂದಲೂ, ಕುಳಿತು ಒರಗಿಕೊಳ್ಳುವ ಆಸನವನ್ನು ಬಂಗಾರದಿಂದಲೂ, ಆಸನವನ್ನು ಧೂಮ್ರವರ್ಣದ ವಸ್ತ್ರದಿಂದ ಮಾಡಿಸಿದನು. ಅದರ ಮಧ್ಯಭಾಗವನ್ನು ಯೆರೂಸಲೇಮಿನ ಪುತ್ರಿಯರು ತಮ್ಮ ಪ್ರೀತಿಗೆ ಗುರುತಾಗಿ ಕಸೂತಿಯಿಂದ ಅಲಂಕರಿಸಿದರು. 11 ಚೀಯೋನಿನ ಮಹಿಳೆಯರೇ, ಹೊರಟು ಬನ್ನಿ ರಾಜನಾದ ಸೊಲೊಮೋನನನ್ನು ನೋಡ ಬನ್ನಿ. ಅವನು ವಿವಾಹ ದಿನದ ಉತ್ಸವದಂದು ಆತನ ತಾಯಿ ಆತನಿಗೆ ತೊಡಿಸಿದ ಕಿರೀಟವನ್ನು ಆತ ಧರಿಸಿರುವುದನ್ನು ನೋಡಬನ್ನಿ! |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.