Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನೆಹೆಮೀಯ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ನೆಹೆಮೀಯನು ಯೆರೂಸಲೇಮಿಗೆ ಹೋಗಲು ರಾಜಾಜ್ಞೆಹೊಂದಿದ್ದು

1 ನಾನು ಅರಸನ ಪಾನಸೇವಕನಾಗಿದ್ದನು. ಅರಸನಾದ ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ ನಾನು ದ್ರಾಕ್ಷಾರಸವನ್ನು ತಂದು ಅವನಿಗೆ ಕೊಟ್ಟೆನು. ನಾನು ಅರಸನ ಸನ್ನಿಧಿಯಲ್ಲಿ ಇದ್ದಾಗ ಹಿಂದೆ ಎಂದೂ ಮನಗುಂದಿದವನಂತೆ ಇರಲಿಲ್ಲ.

2 ಅರಸನು ನನಗೆ, “ನಿನ್ನ ಮುಖ ಕಳೆಗುಂದಿರುವುದೇಕೆ? ನೀನು ಅಸ್ವಸ್ಥನಂತೆ ಕಾಣುವುದಿಲ್ಲ; ಇದು ಮನೋವೇದನೆಯಿಂದಾಗಿದೆಯೇ ಹೊರತು ಬೇರೇನೂ ಕಾರಣ ಇರಲಾರದು” ಎಂದು ಹೇಳಲು ನನಗೆ ಮಹಾ ಭೀತಿಯುಂಟಾಯಿತು.

3 ನಾನು ಅರಸನಿಗೆ, “ಅರಸನು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟು ಹೋಗಿವೆ; ಹೀಗಿರುವಲ್ಲಿ ನನ್ನ ಮುಖವು ಕಳೆಗುಂದದೆ ಇರುವುದು ಹೇಗೆ?” ಎಂದು ಹೇಳಿದೆನು.

4 ಆಗ ಅರಸನು, “ನಿನ್ನ ಅಪೇಕ್ಷೆಯೇನು” ಎಂದು ನನ್ನನ್ನು ಕೇಳಿದನು. ಆಗ ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ,

5 ಅರಸನಿಗೆ ಹೀಗೆ ಉತ್ತರಕೊಟ್ಟೆನು, “ಅರಸನೇ ನಿಮ್ಮ ಚಿತ್ತವಿರುವುದಾದರೆ ಮತ್ತು ತಮ್ಮ ಸೇವಕನಾದ ನಾನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವನ್ನು ತಿರುಗಿ ಕಟ್ಟುವುದಕ್ಕಾಗಿ ಯೆಹೂದ ದೇಶಕ್ಕೆ ಹೋಗಲು ನನಗೆ ಅಪ್ಪಣೆಯಾಗಬೇಕು” ಎಂದು ಹೇಳಿದೆನು.

6 ರಾಣಿಯು ಅರಸನ ಹತ್ತಿರದಲ್ಲೇ ಕುಳಿತುಕೊಂಡಿದ್ದಳು. ಅರಸನು ನನಗೆ, “ಪ್ರಯಾಣಕ್ಕೆ ನಿನಗೆಷ್ಟು ಕಾಲ ಬೇಕು? ಯಾವಾಗ ಹಿಂದಿರುಗುವಿ” ಎಂದು ವಿಚಾರಿಸಿದಾಗ ನಾನು ಕಾಲವನ್ನು ಸೂಚಿಸಲು ಅರಸನು ಒಪ್ಪಿಕೊಂಡು ಅಪ್ಪಣೆಕೊಟ್ಟನು.

7 ತರುವಾಯ ನಾನು ಅರಸನಿಗೆ, “ನದಿಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳ ಮೂಲಕ ಹಾದು ಯೆಹೂದ ಸೀಮೆಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ

8 ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳು, ಪಟ್ಟಣದ ಪೌಳಿಗೋಡೆ, ನಾನು ಸೇರುವ ಮನೆ ಇವುಗಳಿಗೆ ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡುವ ಹಾಗೆ ಅರಸನು ನನಗೆ ಪತ್ರಗಳನ್ನು ಕೊಡಬೇಕು” ಎಂದು ಬಿನ್ನವಿಸಲು, ನನ್ನ ದೇವರ ಕೃಪಾಹಸ್ತಪಾಲನೆ ನನಗಿದ್ದುದರಿಂದ ಅರಸನು ಅವುಗಳನ್ನು ನನಗೆ ಕೊಟ್ಟನು.

9 ಅರಸನು ನನ್ನನ್ನು ಕಳುಹಿಸುವಾಗ ಸೇನಾಧಿಪತಿಗಳನ್ನೂ, ರಾಹುತರನ್ನೂ ನನ್ನೊಡನೆ ಕಳುಹಿಸಿದನು. ಹೀಗೆ ನಾನು ನದಿಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು.


ನೆಹೆಮೀಯನು ರಾತ್ರಿಯಲ್ಲಿ ಪೌಳಿಗೋಡೆಯನ್ನು ಪರೀಕ್ಷಿಸಿದ್ದು

10 ಇಸ್ರಾಯೇಲರ ಹಿತಚಿಂತಕನೊಬ್ಬನು ಬಂದಿದ್ದಾನೆಂಬ ವರ್ತಮಾನವು ಹೋರೋನ್ ಪಟ್ಟಣದವನಾದ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನಿಗೂ ತಲುಪಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.

11 ಅನಂತರ ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿನಗಳವರೆಗೂ ಇದ್ದೆನು.

12 ಆಮೇಲೆ ಯೆರೂಸಲೇಮಿಗಾಗಿ ಮಾಡತಕ್ಕ ಕಾರ್ಯದ ವಿಷಯವಾಗಿ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾನೆಂಬುದನ್ನು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆನು. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ.

13 ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಿಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಿಲುಗಳನ್ನೂ ನೋಡುತ್ತಾ, ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆನು.

14 ಅಲ್ಲಿಂದ ಬುಗ್ಗೆ ಬಾಗಿಲನ್ನು ಹಾದು ಅರಸನ ಕೊಳಕ್ಕೆ ಬಂದೆನು. ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿರಲಿಲ್ಲ.

15 ಅದಕಾರಣ ನಾನು ರಾತ್ರಿಯಲ್ಲಿ ಹಳ್ಳದ ಬದಿಯ ಮಾರ್ಗವಾಗಿ ಹೋಗಿ ಗೋಡೆಯನ್ನು ಪರೀಕ್ಷಿಸಿದೆನು. ಆ ಮೇಲೆ ಪುನಃ ತಗ್ಗಿನ ಬಾಗಿಲಿನಿಂದ ಹಿಂತಿರುಗಿ ಮನೆಗೆ ಬಂದೆನು.

16 ನಾನು ಆ ವರೆಗೆ ಯೆಹೂದ್ಯರಿಗೂ, ಯಾಜಕರಿಗೂ, ಶ್ರೀಮಂತರಿಗೂ, ಅಧಿಕಾರಿಗಳಿಗೂ ಕೆಲಸ ಮಾಡುವ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ ನಾನು ಎಲ್ಲಿ ಹೋಗಿದ್ದೆನು, ಏನು ಮಾಡಿದೆನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.

17 ನಾನು ಅವರಿಗೆ, “ನಮ್ಮ ದುರಾವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ; ಯೆರೂಸಲೇಮ್ ಪಟ್ಟಣವು ಹಾಳು ಬಿದ್ದಿದೆ, ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ; ಬನ್ನಿರಿ, ಯೆರೂಸಲೇಮಿನ ಗೋಡೆಯನ್ನು ಕಟ್ಟೋಣ. ಹೀಗೆ ಮಾಡಿದರೆ ನಮ್ಮ ಮೇಲಣ ನಿಂದೆಯು ಅಳಿಸಿ ಹೋಗುವುದು” ಎಂದು ಹೇಳಿದೆನು.

18 ಇದಲ್ಲದೆ, ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ, ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು, “ಬನ್ನಿರಿ, ಕಟ್ಟೋಣ” ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಪರಸ್ಪರ ಧೈರ್ಯ ನೀಡಿದರು.

19 ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನೂ, ಅರಬಿಯನಾದ ಗೆಷೆಮನೂ ಈ ವರ್ತಮಾನವನ್ನು ಕೇಳಿದಾಗ ಅವರು ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿ, “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರುದ್ಧವಾಗಿ ತಿರುಗಿ ಬೀಳಬೇಕೆಂದಿದ್ದೀರೋ?” ಎಂದು ಕೇಳಿದರು.

20 ನಾನು ಅವರಿಗೆ, “ಪರಲೋಕದ ದೇವರು ನಮಗೆ ಕಾರ್ಯವನ್ನು ಸಾಧಿಸಿಕೊಡುವನು. ಆದುದರಿಂದ ಆತನ ಸೇವಕರಾದ ನಾವು ಕಟ್ಟುವುದಕ್ಕೆ ಮನಸ್ಸುಮಾಡಿದ್ದೇವೆ. ನಿಮಗಾದರೋ ಯೆರೂಸಲೇಮಿನಲ್ಲಿ ಯಾವ ಪಾಲೂ, ಹಕ್ಕೂ, ಹೆಸರೂ, ಸ್ಮಾರಕವೂ ಇರುವುದಿಲ್ಲ” ಎಂದು ಉತ್ತರಕೊಟ್ಟೆನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು