Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವರನ್ನು ಪ್ರೀತಿಸಬೇಕೆಂಬ ಆಜ್ಞೆ

1 ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ.

2 ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ.

3 ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು.

4 ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು;

5 ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.

6 ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.

7 ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು.

8 ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು, ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು.

9 ನಿಮ್ಮ ಮನೆಬಾಗಿಲಿನ ನಿಲುವು ಪಟ್ಟಿಗಳಲ್ಲಿಯೂ ಮತ್ತು ದ್ವಾರಗಳ ಮೇಲೆಯೂ ಇವುಗಳನ್ನು ಬರೆಯಬೇಕು.

10 ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ, ನೀವು ಕೂಡಿಸದ ಉತ್ತಮ ವಸ್ತುಗಳಿಂದ

11 ತುಂಬಿದ ಮನೆಗಳನ್ನೂ, ನೀವು ತೋಡದ ನೀರುಗುಂಡಿಗಳನ್ನೂ, ನೀವು ಬೆಳಸದ ದ್ರಾಕ್ಷಿತೋಟಗಳನ್ನೂ ಮತ್ತು ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ,

12 ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯದೇ ಎಚ್ಚರದಿಂದಿರಿ.

13 ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು, ಆತನನ್ನೇ ಸೇವಿಸಬೇಕು ಮತ್ತು ಆತನ ಹೆಸರು ಹೇಳಿ ಪ್ರಮಾಣಮಾಡಬೇಕು.

14 ಸುತ್ತಮುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು.

15 ನಿಮ್ಮ ಮಧ್ಯದಲ್ಲಿರುವ ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸುವುದಿಲ್ಲ, ಆತನು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂಮಿಯ ಮೇಲೆ ಉಳಿಯದಂತೆ ನಾಶಮಾಡಾನು.

16 ನೀವು ಮಸ್ಸದಲ್ಲಿ ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ.

17 ನಿಮ್ಮ ದೇವರಾದ ಯೆಹೋವನು ನಿಮಗೆ ನೇಮಿಸಿದ ಆಜ್ಞಾವಿಧಿನಿಯಮಗಳನ್ನು ಅನುಸರಿಸಲೇಬೇಕು.

18 ಯೆಹೋವನ ದೃಷ್ಟಿಗೆ ಯಾವುದು ನ್ಯಾಯವೂ ಮತ್ತು ಯೋಗ್ಯವೂ ಆಗಿದೆಯೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭವುಂಟಾಗುವುದು, ಮತ್ತು ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

19 ಆತನು ತಾನೇ ನಿಮ್ಮ ಶತ್ರುಗಳನ್ನು ನಿಮ್ಮ ಎದುರಿನಿಂದ ಹೊರಡಿಸುವೆನೆಂದು ಮಾತುಕೊಟ್ಟನಲ್ಲವೇ.

20 ಇನ್ನು ಮುಂದೆ ನಿಮ್ಮ ಮಕ್ಕಳು, “ಈ ಆಜ್ಞಾವಿಧಿನಿಯಮಗಳನ್ನು ನಮ್ಮ ದೇವರಾದ ಯೆಹೋವನು ಏಕೆ ನೇಮಿಸಿದನು?” ಎಂದು ವಿಚಾರಿಸುವಾಗ

21 ನೀವು ಅವರಿಗೆ, “ನಾವು ಐಗುಪ್ತದೇಶದಲ್ಲಿ ಫರೋಹನಿಗೆ ದಾಸರಾಗಿದ್ದಾಗ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡುಗಡೆಮಾಡಿದನು.

22 ಆತನು ಐಗುಪ್ತ್ಯರನ್ನೂ, ಫರೋಹನನ್ನೂ ಮತ್ತು ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ, ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ,

23 ತಾನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಮ್ಮನ್ನು ಸೇರಿಸುವುದಕ್ಕಾಗಿ ಐಗುಪ್ತದೇಶದೊಳಗಿಂದ ಬರಮಾಡಿದನು.

24 ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ, ಆತನು ಈಗಲೂ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು.

25 ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿಸಲು ಯೋಗ್ಯರಾಗುವೆವು” ಎಂಬುದಾಗಿ ನೀವು ಉತ್ತರಕೊಡಬೇಕು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು