ಧರ್ಮೋಪದೇಶಕಾಂಡ 30 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನ ಕಡೆಗೆ ತಿರುಗಿಕೊಳ್ಳುವುದರಿಂದ ಉಂಟಾಗುವ ಆಶೀರ್ವಾದಗಳು 1 ನಾನು ನಿಮ್ಮ ಮುಂದೆ ಇಟ್ಟಿರುವ ಆಶೀರ್ವಾದವೂ ಮತ್ತು ಶಾಪವೂ ನಿಮ್ಮ ಅನುಭವಕ್ಕೆ ಬಂದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಚದರಿಸಿರುವ ದೇಶಗಳಲ್ಲಿ ನೀವು ಇವುಗಳನ್ನು ನೆನಪಿಗೆ ತಂದುಕೊಂಡು, 2 ನಿಮ್ಮ ಮಕ್ಕಳ ಸಹಿತವಾಗಿ ನಿಮ್ಮ ದೇವರಾದ ಯೆಹೋವನ ಆಶ್ರಯಕ್ಕೆ ತಿರುಗಿ ಬಂದು, ನಾನು ಈಗ ನಿಮಗೆ ಬೋಧಿಸುವ ಆತನ ಮಾತುಗಳಿಗೆ ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ವಿಧೇಯರಾದರೆ, 3 ನಿಮ್ಮ ದೇವರಾದ ಯೆಹೋವನು ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ, ನಿಮ್ಮನ್ನು ಕನಿಕರಿಸಿ, ತಾನು ನಿಮ್ಮನ್ನು ಚದರಿಸಿರುವ ಎಲ್ಲಾ ದೇಶಗಳಿಂದ ಪುನಃ ಕೂಡಿಸುವನು. 4 ನಿಮ್ಮಲ್ಲಿ ಯಾರಾದರೂ ಭೂಲೋಕದ ಕಟ್ಟಕಡೆಯವರೆಗೆ ಒಯ್ಯಲ್ಪಟ್ಟರೂ, ಅಲ್ಲಿಂದಲೂ ನಿಮ್ಮ ದೇವರಾದ ಯೆಹೋವನು ಅವರನ್ನೂ ಕರೆದುಕೊಂಡು ಬರುವನು. 5 ನಿಮ್ಮ ಪೂರ್ವಿಕರಿಗೆ ಸ್ವತ್ತಾಗಿದ್ದ ದೇಶದಲ್ಲಿ ಸೇರಿಸಿ, ಅದು ನಿಮಗೂ ಸ್ವದೇಶವಾಗುವಂತೆ ಮಾಡಿ, ನಿಮಗೆ ಮೇಲನ್ನುಂಟುಮಾಡಿ ಪೂರ್ವಿಕರಿಗಿಂತಲೂ ಅಧಿಕವಾಗಿ ನಿಮ್ಮನ್ನು ಹೆಚ್ಚಿಸುವನು. 6 ನಿಮ್ಮ ದೇವರಾದ ಯೆಹೋವನು ನಿಮ್ಮ ಮತ್ತು ನಿಮ್ಮ ಸಂತತಿಯವರ ಹೃದಯಕ್ಕೆ ಸುನ್ನತಿಮಾಡುವನು. ಆಗ ನೀವು ಆತನನ್ನು ಸಂಪೂರ್ಣವಾದ ಹೃದಯದಿಂದಲೂ ಮತ್ತು ಸಂಪೂರ್ಣವಾದ ಮನಸ್ಸಿನಿಂದಲೂ ಪ್ರೀತಿಸಿ ಬದುಕಿಕೊಳ್ಳುವಿರಿ. 7 ನಿಮ್ಮ ದೇವರಾದ ಯೆಹೋವನು ಆ ಶಾಪಗಳನ್ನೆಲ್ಲಾ, ನಿಮ್ಮನ್ನು ದ್ವೇಷಿಸಿ ಹಿಂಸಿಸಿದ ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು. 8 ನೀವಾದರೋ ಯೆಹೋವನ ಮಾತಿಗೆ ಪುನಃ ವಿಧೇಯರಾಗಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳಂತೆ ನಡೆಯುವಿರಿ. 9 ಮತ್ತು ನಿಮ್ಮ ದೇವರಾದ ಯೆಹೋವನು ನಿಮ್ಮ ಸಂತಾನ, ಪಶು ಮತ್ತು ವ್ಯವಸಾಯಗಳನ್ನು ಹೆಚ್ಚಿಸಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಪಡಿಸಿ ನಿಮಗೆ ಮೇಲನ್ನು ಉಂಟುಮಾಡುವನು. 10 ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಸಂಪೂರ್ಣವಾದ ಹೃದಯದಿಂದಲೂ ಮತ್ತು ಸಂಪೂರ್ಣವಾದ ಮನಸ್ಸಿನಿಂದಲೂ ಆತನ ಕಡೆಗೆ ತಿರುಗಿಕೊಳ್ಳಲು, ಆತನು ನಿಮ್ಮ ಪೂರ್ವಿಕರ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲಿಯೂ ತಿರುಗಿ ಸಂತೋಷಪಟ್ಟು ನಿಮಗೆ ಮೇಲನ್ನು ಉಂಟುಮಾಡುವನು. ಜೀವಮರಣಗಳ ಆಯ್ಕೆ 11 ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶವು ನಿಮಗೆ ಗ್ರಹಿಸುವುದಕ್ಕೆ ಕಷ್ಟವಾದದ್ದು ಯಾವುದು ಇಲ್ಲ, ಅನುಸರಿಸುವುದಕ್ಕೆ ಅಸಾಧ್ಯವಾದದ್ದೂ ಅಲ್ಲ. 12 ಇದು ಮೇಲಣ ಲೋಕದಲ್ಲಿರುವ ಮಾತಲ್ಲ. “ನಮಗೋಸ್ಕರ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೇಳಿ ಕೈಕೊಂಡೇವು” ಅಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ. 13 ಮತ್ತು “ಇದು ಸಮುದ್ರದ ಆಚೆ ಇರುವ ಮಾತಲ್ಲ. ನಮಗೋಸ್ಕರ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡುಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೈಕೊಂಡೇವು” ಅಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ. 14 ಈ ವಾಕ್ಯವು ನಿಮ್ಮ ಸಮೀಪದಲ್ಲಿಯೇ ಇದೆ; ಇದು ನಿಮ್ಮ ಬಾಯಲ್ಲಿಯೂ ಮತ್ತು ಹೃದಯದಲ್ಲಿಯೂ ಇದೆ; ಇದನ್ನು ಅನುಸರಿಸುವುದಕ್ಕೆ ಅವಕಾಶವುಂಟಷ್ಟೆ. ಶುಭವನ್ನೇ ಆರಿಸಿಕೊಳ್ಳಬೇಕೆಂದು ಮೋಶೆ ಬೋಧಿಸಿದ್ದು 15 “ನೋಡಿರಿ, ಈಗ ನಾನು ಜೀವ ಮತ್ತು ಶುಭಗಳನ್ನೂ ಹಾಗೂ ಮರಣ ಮತ್ತು ಅಶುಭಗಳನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 16 ನಾನು ಈಗ ನಿಮಗೆ ಬೋಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನು ಹೇಳಿದ ಮಾರ್ಗದಲ್ಲಿ ನಡೆದು, ಆತನ ಆಜ್ಞಾವಿಧಿ ನಿಯಮಗಳನ್ನು ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚುವಿರಿ; ಮತ್ತು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು. 17 ಆದರೆ ನೀವು ಆತನನ್ನು ಬಿಟ್ಟು ಆತನ ಮಾತನ್ನು ಕೇಳಲೊಲ್ಲದೆ ಮರುಳುಗೊಂಡವರಾಗಿ, ಇತರ ದೇವರುಗಳನ್ನು ಪೂಜಿಸಿ, ಸೇವಿಸಿದರೆ, 18 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನ್ ನದಿಯನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಇರದೆ ನಾಶವಾಗಿಯೇ ಹೋಗುವಿರೆಂದು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. 19 ನಾನು ಜೀವ ಮತ್ತು ಮರಣಗಳನ್ನೂ ಹಾಗು ಆಶೀರ್ವಾದ ಮತ್ತು ಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಮತ್ತು ಆಕಾಶಗಳು ಸಾಕ್ಷಿಗಳಾಗಿರಲಿ. ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆರಿಸಿಕೊಳ್ಳಿರಿ. 20 ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿರಿ, ಆತನನ್ನು ಹೊಂದಿಕೊಂಡೇ ಇರಿ. ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವುದಕ್ಕೂ ಬಹುಕಾಲ ಇರುವುದಕ್ಕೂ ಆತನೇ ಆಧಾರ” ಎಂದು ಹೇಳಿದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.