ಧರ್ಮೋಪದೇಶಕಾಂಡ 26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪ್ರಥಮಫಲಗಳ ಸಮರ್ಪಣೆ 1 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶವನ್ನು ನೀವು ಸೇರಿ, ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸುವಾಗ, 2 ನಿಮ್ಮಲಿರುವ ಪ್ರತಿಯೊಬ್ಬನೂ ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿ ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತರಬೇಕು. 3 ನೀವು ಅದನ್ನು ತೆಗೆದುಕೊಂಡುಹೋಗಿ ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ, “ಯೆಹೋವನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಾವು ಸೇರಿದ್ದಾಯಿತೆಂದು ನೀನು ಸೇವಿಸುವ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾವು ಈಗ ಒಪ್ಪಿಕೊಂಡಿದ್ದೇವೆ” ಎಂದು ಹೇಳಬೇಕು. 4 ಯಾಜಕನು ಆ ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮುಂದೆ ಇಡುವನು. 5 ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಅಲೆದಾಡುತ್ತಾ ಸ್ವಲ್ಪ ಜನರೊಡನೆ ಐಗುಪ್ತದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಅವರು ಮಹಾಬಲಿಷ್ಠ ಜನಾಂಗವಾದರು. 6 ಐಗುಪ್ತ್ಯರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು. 7 ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ, ನಮ್ಮ ದುರವಸ್ಥೆಯನ್ನೂ, ಕಷ್ಟವನ್ನೂ ಮತ್ತು ಉಪದ್ರವವನ್ನೂ ನೋಡಿದನು. 8 ಆತನು ತನ್ನ ಭುಜಬಲವನ್ನೂ, ಶಿಕ್ಷಾಹಸ್ತವನ್ನೂ, ಮಹಾಭೀತಿಗಳನ್ನೂ, ಮಹತ್ಕಾರ್ಯಗಳನ್ನೂ ಮತ್ತು ಸೂಚಕಕಾರ್ಯಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದನು. 9 ಅವನು ನಮ್ಮನ್ನು ಐಗುಪ್ತದೇಶದಿಂದ ಕರೆತಂದು ಹಾಲೂ ಮತ್ತು ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿದ್ದಾನೆ. 10 ಆದುದರಿಂದ ಯೆಹೋವನೇ, ನೀನು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ, ಅದನ್ನು ಸ್ವೀಕರಿಸಬೇಕು” ಎಂದು ಹೇಳಿ ಆ ಪ್ರಥಮಫಲಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿಟ್ಟು ಆತನನ್ನು ಆರಾಧಿಸಬೇಕು. 11 ಆತನು ನಿಮಗೂ ಮತ್ತು ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ, ಲೇವಿಯರೂ ಮತ್ತು ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು. ಪ್ರತಿ ಮೂರನೆ ವರ್ಷದಲ್ಲಿ ದಶಮಾಂಶವನ್ನು ಸಮರ್ಪಿಸುವ ಕ್ರಮ 12 ದಶಮಾಂಶವನ್ನು ಕೊಡಬೇಕಾದ ಮೂರನೆಯ ವರ್ಷದಲ್ಲಿ ನಿಮಗುಂಟಾದ ಆದಾಯದ ದಶಮ ಭಾಗವನ್ನು ನೀವು ಪ್ರತ್ಯೇಕಿಸಿದಾಗ, ನಿಮ್ಮ ನಿಮ್ಮ ಊರುಗಳಲ್ಲಿರುವ ಲೇವಿಯರೂ, ಪರದೇಶಿಗಳೂ, ಅನಾಥರು ಮತ್ತು ವಿಧವೆಯರೂ ಊಟಮಾಡಿ ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕಲ್ಲಾ. 13 ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ನಾವು ಪ್ರತ್ಯೇಕಿಸಿದ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದಿದ್ದೇವೆ. ನೀನು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರು, ಪರದೇಶಿಗಳು, ಅನಾಥರು, ವಿಧವೆಯರು ಇಂಥವರಿಗೆ ಕೊಟ್ಟಿದ್ದೇವೆ ನಿನ್ನ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ ಮತ್ತು ಮರೆಯಲೂ ಇಲ್ಲ. 14 ನಾವು ಸತ್ತವರಿಗೋಸ್ಕರ ದುಃಖಿಸುವ ಕಾಲದಲ್ಲೆಲ್ಲಾ ಅದರಲ್ಲಿ ಏನೂ ತಿನ್ನಲಿಲ್ಲ; ಅಶುದ್ಧರಾಗಿ ಅದನ್ನು ತೆಗೆದುಹಾಕಲಿಲ್ಲ; ಸತ್ತವರಿಗೋಸ್ಕರ ಅದರಲ್ಲಿ ಏನೂ ಕೊಡಲಿಲ್ಲ; ನಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಟ್ಟು ನೀನು ನೇಮಿಸಿದ್ದನ್ನೆಲ್ಲಾ ಅನುಸರಿಸಿದ್ದೇವೆ. 15 ನೀನು ನಿನ್ನ ಪರಿಶುದ್ಧ ವಾಸಸ್ಥಾನವಾಗಿರುವ ಪರಲೋಕದಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿನ್ನ ಜನರಾದ ಇಸ್ರಾಯೇಲರನ್ನೂ ಹಾಲೂ ಮತ್ತು ಜೇನೂ ಹರಿಯುವ ದೇಶದಲ್ಲಿ ನೀನು ನಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಮ್ಮನ್ನು ನೆಲೆಸುವಂತೆ ಮಾಡಿ, ನಮ್ಮನ್ನು ಈ ಭೂಮಿಯನ್ನೂ ಆಶೀರ್ವದಿಸು ದೇವರೇ” ಎಂದು ಹೇಳಬೇಕು. ಯೆಹೋವನು ಇಸ್ರಾಯೇಲರೊಡನೆ ಮಾಡಿಕೊಂಡ ಒಡಂಬಡಿಕೆ 16 ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನಿಮಗೆ ಈಗ ಆಜ್ಞಾಪಿಸಿದ್ದಾನೆ. ಆದುದರಿಂದ ನೀವು ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. 17 ನಮಗೆ ಯೆಹೋವನೇ ದೇವರಾಗಿರುವನೆಂದೂ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿಯಮಗಳನ್ನು ಕೈಕೊಂಡು, ಆತನ ಮಾತಿಗೆ ಲಕ್ಷ್ಯವಿಡುವೆವು ಎಂದು ನೀವು ಈಗ ಒಡಂಬಟ್ಟಿದ್ದೀರಿ. 18 ಯೆಹೋವನೋ ನಿಮ್ಮ ವಿಷಯದಲ್ಲಿ, “ಇವರು ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸುವ ಪಕ್ಷಕ್ಕೆ ನನ್ನ ವಾಗ್ದಾನಕ್ಕೆ ಅನುಸಾರವಾಗಿ ನನಗೆ 19 ಸ್ವಕೀಯಜನರಾಗಿ ಇರುವರೆಂದೂ, ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿ ಮತ್ತು ಘನಮಾನಗಳನ್ನು ಉಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರು” ಎಂದು ಒಪ್ಪಿಕೊಂಡಿದ್ದಾನೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.