Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ದಾನಿಯೇಲ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಟಗರಿನ ಮತ್ತು ಹೋತದ ವಿಷಯವಾದ ಕನಸು

1 ಮೊದಲು ನನಗೆ ಕಾಣಿಸಿದ ಕನಸಲ್ಲದೆ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿಯೂ ಇನ್ನೊಂದು ಕನಸು ದಾನಿಯೇಲನಾದ ನನಗೆ ಕಾಣಿಸಿತು.

2 ನಾನು ಕಂಡ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿದ್ದೆನು. ಕನಸಿನಲ್ಲಿ ಊಲಾ ಕಾಲುವೆಯ ದಡದ ಮೇಲೆ ನಿಂತುಕೊಂಡಿದ್ದ ಹಾಗೆ ತೋರಿತು.

3 ನಾನು ಕಣ್ಣೆತ್ತಿ ನೋಡಲು ಇಗೋ, ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದಾಗಿತ್ತು. ಆ ದೊಡ್ಡದು ಮೊಳೆತದ್ದು ಚಿಕ್ಕ ಕೊಂಬು ಮೊಳೆತ ಮೇಲೆ.

4 ನಾನು ನೋಡುತ್ತಿದ್ದ ಹಾಗೆ ಆ ಟಗರು ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ ಹಾರಾಡುತ್ತಿತ್ತು. ಯಾವ ಜಂತುವೂ ಅದರೆದುರಿಗೆ ನಿಲ್ಲಲಾರದೆ ಹೋಯಿತು. ಅದರಿಂದ ಬಿಡಿಸಲು ಯಾವ ಪ್ರಾಣಿಗೂ ಶಕ್ತಿಯಿರಲಿಲ್ಲ. ಅದು ಮನಸ್ಸು ಬಂದಂತೆ ನಡೆದು ತನ್ನನ್ನು ಹೆಚ್ಚಿಸಿಕೊಂಡಿತು.

5 ನಾನು ಗಮನಿಸುತ್ತಿರುವಾಗ ಇಗೋ, ಒಂದು ಹೋತವು ಪಶ್ಚಿಮದಿಂದ ಭೂಮಂಡಲವನ್ನೆಲ್ಲಾ ದಾಟಿಕೊಂಡು ನೆಲವನ್ನು ಮುಟ್ಟದೆ ಓಡಿ ಬಂತು. ಅದರ ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿತ್ತು.

6 ನಾನು ಕಾಲುವೆಯ ಹತ್ತಿರ ಕಂಡ ಎರಡು ಕೊಂಬಿನ ಟಗರಿನ ಬಳಿಗೆ ಆ ಹೋತವು ಬಂದು, ಪರಾಕ್ರಮದಿಂದ ಉಬ್ಬಿ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು.

7 ನನ್ನ ಕನಸಿನಲ್ಲಿ ಟಗರನ್ನು ಸಮೀಪಿಸಿ, ಅದರ ಮೇಲಣ ಕ್ರೋಧದಿಂದ ಉರಿಯುತ್ತಾ, ಅದರ ಮೇಲೆ ಹಾಯ್ದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದಕ್ಕೆ ಎದುರು ಬೀಳಲು ಟಗರಿಗೆ ಶಕ್ತಿಯಿರಲಿಲ್ಲ. ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿದು ಹಾಕಿತು. ಟಗರನ್ನು ಹೋತದಿಂದ ಬಿಡಿಸುವ ಪ್ರಾಣಿ ಯಾವುದೂ ಇರಲಿಲ್ಲ.

8 ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.

9 ಅವುಗಳೊಳಗೆ ಒಂದರಲ್ಲಿ ಒಂದು ಚಿಕ್ಕ ಕೊಂಬು ಮೊಳೆತು ಬಹು ದೊಡ್ಡದಾಗಿ ಬೆಳೆದು ದಕ್ಷಿಣದಲ್ಲಿಯೂ, ಪೂರ್ವದಲ್ಲಿಯೂ ಅಂದಚಂದದ ದೇಶದಲ್ಲಿಯೂ ಪ್ರಬಲವಾಯಿತು.

10 ಅದು ನಕ್ಷತ್ರ ಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ, ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು.

11 ಇದಲ್ಲದೆ ಆ ಗಣದ ಅಧಿಪತಿಯನ್ನೂ ಎದುರಿಸುವಷ್ಟು ಉಬ್ಬಿಕೊಂಡು ನಿತ್ಯಹೋಮವನ್ನು ಆತನಿಗೆ ಸಲ್ಲದಂತೆ ಮಾಡಿತು.

12 ಆತನ ಪವಿತ್ರ ಸ್ಥಾನವನ್ನು ಕೆಡವಿ ನಿತ್ಯ ಹೋಮವನ್ನು ಅಡಗಿಸುವುದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ, ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು.

13 ಆಗ ಒಬ್ಬ ದೇವದೂತನು ಮಾತನಾಡುವುದನ್ನು ಕೇಳಿದೆನು. ಮಾತನಾಡುವವನನ್ನು ಮತ್ತೊಬ್ಬ ದೇವದೂತನು, “ನಿತ್ಯಹೋಮವನ್ನು ನಿಲ್ಲಿಸುವುದು, ಭಯಂಕರವಾದ ದೇವದ್ರೋಹ ಮಾಡುವುದು, ಪವಿತ್ರಾಲಯವನ್ನೂ, ದೇವಭಕ್ತ ಗಣವನ್ನು ತುಳಿಯುವುದು ಎಂಬ ಕನಸಿನ ಕಾರ್ಯಗಳು ಎಷ್ಟು ಕಾಲ ನಡೆಯುವುದು?” ಎಂದು ಪ್ರಶ್ನೆಮಾಡಿದನು.

14 ಅವನು ಇವನಿಗೆ, “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರ ರವರೆಗೆ ನಡೆಯುವವು. ಅನಂತರ ಪವಿತ್ರಾಲಯಕ್ಕೆ ಪುನಃ ನ್ಯಾಯಸ್ಥಾಪನೆಯಾಗುವುದು” ಎಂದು ಹೇಳಿದನು.


ಗಬ್ರಿಯೇಲನು ಕನಸಿನ ಅರ್ಥವನ್ನು ವಿವರಿಸಿದ್ದು

15 ದಾನಿಯೇಲನಾದ ನಾನು ಈ ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ಇಗೋ, ಮನುಷ್ಯ ಸದೃಶನೊಬ್ಬನು ನನ್ನೆದುರಿಗೆ ನಿಂತಿದ್ದನು.

16 ಆಗ, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಇವನಿಗೆ ತಿಳಿಯಪಡಿಸು” ಎಂದು ಮನುಷ್ಯ ಧ್ವನಿಯಂತಹ ಒಂದು ವಾಣಿಯು ಊಲಾ ಕಾಲುವೆಯ ದಡಗಳ ನಡುವೆ ನನಗೆ ಕೇಳಿಸಿತು.

17 ಅದರಂತೆ ಅವನು ನನ್ನ ಬಳಿಗೆ ಬಂದನು. ಅವನು ಬರಲು, ನಾನು ಭಯಭ್ರಾಂತನಾಗಿ ಅಡ್ಡಬಿದ್ದೆನು. ನನಗೆ ಅವನು, “ನರಪುತ್ರನೇ, ಇದು ಮನದಟ್ಟಾಗಿರಲಿ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು” ಎಂದು ಹೇಳಿದನು.

18 ಅವನು ನನ್ನೊಡನೆ ಮಾತನಾಡುತ್ತಿರುವಲ್ಲಿ ನಾನು ಮೈಮರೆತು ಬೋರಲು ಬಿದ್ದಿದ್ದೆನು. ಆಗ ಅವನು ನನ್ನನ್ನು ಮುಟ್ಟಿ ನಿಲ್ಲಿಸಿ ನನಗೆ,

19 “ಇಗೋ, ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುವೆನು; ಅದು ಕ್ಲುಪ್ತವಾದ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು.

20 ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯ ಮತ್ತು ಪಾರಸಿಯ ರಾಜರು.

21 ಆ ಹೋತವು ಗ್ರೀಕ್ ರಾಜ್ಯ, ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ.

22 ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನೆಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವುದಿಲ್ಲ.

23 ಆ ರಾಜ್ಯಗಳ ಕಡೆಯ ಕಾಲದಲ್ಲಿ, ಅಧರ್ಮಿಗಳ ಅಧರ್ಮವು ಪೂರ್ತಿಯಾದಾಗ ಕಠಿಣಮುಖನೂ, ತಂತ್ರವುಳ್ಳವನೂ ಆದ ಒಬ್ಬ ರಾಜನು ತಲೆದೋರುವನು.

24 ಅವನು ಪ್ರಬಲನಾಗುವನು, ಆದರೆ ಸ್ವಬಲದಿಂದಲ್ಲ. ಅತ್ಯಧಿಕವಾಗಿ ಹಾಳುಮಾಡಿ ವೃದ್ಧಿಗೆ ಬಂದು, ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲಿಷ್ಠರನ್ನೂ, ದೇವಜನರನ್ನೂ ಧ್ವಂಸಮಾಡುವನು.

25 ಯುಕ್ತಿಯಿಂದಲೇ ತನ್ನ ಮೋಸವನ್ನು ಸಿದ್ಧಿಗೆ ತಂದು, ಮನದಲ್ಲಿ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹಳ ಜನರನ್ನು ನಾಶಪಡಿಸಿ, ಪ್ರಭುಗಳ ಪ್ರಭುವಿಗೂ ವಿರುದ್ಧವಾಗಿ ಏಳುವನು. ಆಹಾ, ಯಾರ ಕೈಯೂ ಸೋಕದೆ ಹಾಳಾಗುವನು.

26 ಕನಸಿನಲ್ಲಿ ತಿಳಿಸಲ್ಪಟ್ಟ ಉದಯಾಸ್ತಮಾನಗಳ ವಿಷಯವು ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹು ದಿನಗಳ ನಂತರ ನಡೆಯುವಂಥದು” ಎಂದು ಹೇಳಿದನು.

27 ಆಗ ದಾನಿಯೇಲನಾದ ನಾನು ಮೂರ್ಛೆಹೋಗಿ, ಕೆಲವು ದಿನಗಳು ಕಾಯಿಲೆ ಬಿದ್ದೆನು. ಆ ಮೇಲೆ ಎದ್ದು ರಾಜಕಾರ್ಯವನ್ನು ನಡೆಸಿದೆನು. ಆ ಕನಸಿಗೆ ಬೆಚ್ಚಿಬೆರಗಾದೆನು. ಅದು ಯಾರಿಗೂ ತಿಳಿಯಲಿಲ್ಲ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು